ADVERTISEMENT

ನೌಕಾಪಡೆ ಅಧಿಕಾರಿ ಸೌರಭ್‌ ಕೊಲೆ ಪ್ರಕರಣ: ಶವ ಪರೀಕ್ಷೆಯಲ್ಲಿ ಕ್ರೌರ್ಯ ಬಯಲು

ಪಿಟಿಐ
Published 22 ಮಾರ್ಚ್ 2025, 13:41 IST
Last Updated 22 ಮಾರ್ಚ್ 2025, 13:41 IST
<div class="paragraphs"><p>ಸೌರಭ್‌ ಅವರ ಪತ್ನಿ ಮುಸ್ಕಾನ್‌ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್‌ ಶುಕ್ಲಾ</p></div>

ಸೌರಭ್‌ ಅವರ ಪತ್ನಿ ಮುಸ್ಕಾನ್‌ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್‌ ಶುಕ್ಲಾ

   

ಮೀರಠ್‌ (ಉತ್ತರ ಪ್ರದೇಶ): ನೌಕಾಪಡೆಯ ಅಧಿಕಾರಿ ಸೌರಭ್‌ ರಜಪೂತ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಮರಣೋತ್ತರ ಪರೀಕ್ಷೆ ವರದಿಯು  ಕ್ರೌರ್ಯದ ಭೀಕರತೆಯನ್ನು ತೆರೆದಿಟ್ಟಿದೆ.

ಸೌರಭ್‌ ಅವರ ಹೃದಯಕ್ಕೆ ಚಾಕುವಿನಿಂದ ಮೂರು ಬಾರಿ ಚುಚ್ಚಲಾಗಿತ್ತು. ಇದರಿಂದ  ಅವರ ಹೃದಯದ ಆಳದವರೆಗೂ ತೂತಾಗಿತ್ತು. ನಂತರ ಡ್ರಮ್‌ನಲ್ಲಿ ಮೃತದೇಹವನ್ನು ಇರಿಸಲು  ದೇಹ ಮತ್ತು ರುಂಡವನ್ನು ಬೇರೆ ಬೇರೆ ಮಾಡಲಾಗಿತ್ತು. ಎರಡೂ ಕೈಗಳನ್ನೂ ಮುಂಗೈವರೆಗೆ ಕತ್ತರಿಸಲಾಗಿತ್ತು, ಕಾಲುಗಳನ್ನು ಬಗ್ಗಿಸಲಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

ಮಾ.4ರಂದು ಸೌರಭ್‌ ಅವರ ಪತ್ನಿ ಮುಸ್ಕಾನ್‌ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್‌ ಶುಕ್ಲಾ ಇಬ್ಬರು ಸೇರಿ ಸೌರಭ್‌ಗೆ ಮದ್ಯ ಕುಡಿಸಿ, ಇರಿದು ಕೊಂದಿದ್ದರು. ನಂತರ ಮೃತದೇಹವನ್ನು ಡ್ರಮ್‌ ಒಳಗೆ ತುರುಕಿ, ಅದರ ಮೇಲೆ ಸಿಮೆಂಟ್ ಮುಚ್ಚಿದ್ದರು. ಬಳಿಕ ಇಬ್ಬರು ಹಿಮಾಚಲ ಪ್ರದೇಶಕ್ಕೆ ಹೋಗಿ ಪ್ರಕರಣದ ದಾರಿ ತಪ್ಪಿಸಲು ಯತ್ನಿಸಿದ್ದರು. 

ತ್ವರಿತಗತಿಯ ವಿಶೇಷ ಕೋರ್ಟ್‌ನಲ್ಲಿ ವಿಚಾರಣೆಗೆ ಸಿದ್ಧತೆ

ಪ್ರಕರಣದ ವಿಚಾರಣೆಯನ್ನು ತ್ವರಿತಗತಿಯ ವಿಶೇಷ ನ್ಯಾಯಾಲಯದಲ್ಲಿ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು. ಸಾಧ್ಯವಾದಷ್ಟು ಬೇಗ ದೋಷಾರೋಪ ಪಟ್ಟಿ ಸಲ್ಲಿಸಲು ಪೊಲೀಸರು ನಿರ್ಧರಿಸಿದ್ದಾರೆ. ತ್ವರಿತಗತಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆದಲ್ಲಿ ಆರೋಪಿಗಳಿಗೆ ಶೀಘ್ರ ಶಿಕ್ಷೆಯಾಗಲಿದೆ ಎಂದು ತಿಳಿಸಿದರು. ಆರೋಪಿಗಳ 14 ದಿನಗಳ ನ್ಯಾಯಾಂಗ ಬಂಧನ ಅವಧಿ ಮುಗಿದ ನಂತರ ಪೊಲೀಸ್ ವಶಕ್ಕೆ ಕೇಳಿದ್ದೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.