ADVERTISEMENT

ಅಡಿಕೆಯಿಂದ ಆರೋಗ್ಯಕ್ಕೆ ಹಾನಿ: ಕೇಂದ್ರದಿಂದ ಅಧ್ಯಯನ

ಪಿಟಿಐ
Published 5 ಡಿಸೆಂಬರ್ 2024, 0:55 IST
Last Updated 5 ಡಿಸೆಂಬರ್ 2024, 0:55 IST
<div class="paragraphs"><p>ಅಡಿಕೆ </p></div>

ಅಡಿಕೆ

   

ನವದೆಹಲಿ: ಅಡಿಕೆಯಿಂದಾಗುವ ಆರೋಗ್ಯ ಪರಿಣಾಮಗಳ ಕುರಿತು ನಿರ್ಣಾಯಕ ಪುರಾವೆಗಳನ್ನು ಒದಗಿಸಲು ‘ಅಡಿಕೆ ಮತ್ತು ಮಾನವನ ಆರೋಗ್ಯ’ ಕುರಿತ ಸಾಕ್ಷ್ಯ ಆಧಾರಿತ ಸಂಶೋಧನೆ ನಡೆಸಲು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಯೋಜಿಸಿದೆ. 

ಅಖಿಲ ಭಾರತ ವೈದ್ಯಕೀಯ ಸಂಸ್ಥೆ (ಏಮ್ಸ್‌), ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನ ಪರಿಷತ್‌ ಸೇರಿದಂತೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ 16 ಸಂಸ್ಥೆಗಳ ತಜ್ಞರು ಮಾನವದ ಆರೋಗ್ಯದ ಮೇಲೆ ಅಡಿಕೆಯ ಪರಿಣಾಮದ ಕುರಿತು ವಿವರವಾದ ಸಂಶೋಧನೆ ನಡೆಸಲಿದ್ದಾರೆ. ಅಡಿಕೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಪ್ರಕಟಿಸಿರುವ ವರದಿ ಕುರಿತು ಸಂಸದ ರಾಜ್‌ಮೋಹನ್‌ ಉನ್ನಿತಾನ್ ಅವರು ಲೋಕಸಭೆಯಲ್ಲಿ ಮಂಗಳವಾರ ಕೇಳಿದ ಪ್ರಶ್ನೆಗೆ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವ ಭಗೀರಥ ಚೌಧರಿ ಲಿಖಿತ ಉತ್ತರ ನೀಡಿದ್ದಾರೆ. 

ADVERTISEMENT

‘ಅಡಿಕೆ ಕ್ಯಾನ್ಸರ್‌ಕಾರಕ ಉತ್ಪನ್ನ ಎಂದು ಬಿಂಬಿಸುವ ಉದ್ದೇಶದಿಂದ ಸಂಶೋಧನಾ ವರದಿಗಳನ್ನೇ ತಿರುಚಿ ಪ್ರಕಟಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇಂಟರ್‌ನ್ಯಾಷನಲ್‌ ಏಜನ್ಸಿ ಫಾರ್‌ ರಿಸರ್ಚ್‌ ಆನ್‌ ಕ್ಯಾನ್ಸರ್‌ (ಐಎಆರ್‌ಸಿ) ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಇತ್ತೀಚೆಗೆ ಪತ್ರ ಬರೆದಿದ್ದರು. ‘ಮೂಲ ಸಂಶೋಧನಾ ವರದಿಗಳಲ್ಲಿ ತಂಬಾಕು ಸೇವನೆಯ ಪರಿಣಾಮದ ಕುರಿತು ಉಲ್ಲೇಖಿಸಲಾಗಿತ್ತು. ಆದರೆ, ಅಡಿಕೆ ಕ್ಯಾನ್ಸರ್ ಕಾರಕವೆಂದು ಬಿಂಬಿಸುವ ಸಲುವಾಗಿ ಮಾದರಿ ಸಂಖ್ಯೆ ಮತ್ತು ಶೀರ್ಷಿಕೆಯನ್ನು ತಿರುಚಿ ವರದಿ ಪ್ರಕಟಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಐಎಆರ್‌ಸಿ ಕ್ರಮ ಅಕ್ಷಮ್ಯ. ಇದು ಅಡಿಕೆ ಕೃಷಿಯನ್ನೇ ನಂಬಿರುವ ರೈತರ ಬದುಕಿಗೆ ಬಲವಾದ ಪೆಟ್ಟು ನೀಡಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಜತೆಗೆ, ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ರಾಜ್ಯದ ಸಂಸದರು ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಅವರನ್ನು ಕಳೆದ ವಾರ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. 

‘ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಅಡಿಕೆಯಿಂದಾಗುವ ಆರೋಗ್ಯ ಪರಿಣಾಮಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ ನಡೆಸಿರುವ ಕೆಲವು ಸಂಶೋಧನೆಗಳು ಮಿತಿಯಿಂದ ಕೂಡಿವೆ. ಹೀಗಾಗಿ, ಈ ಅಧ್ಯಯನಗಳು ಅಪೂರ್ಣವಾಗಿವೆ. ಗಮನಾರ್ಹವಾಗಿ, ಈ ಅಧ್ಯಯನಗಳಲ್ಲಿ ಹೆಚ್ಚಿನವು ಅಗಿಯುವ ಮಿಶ್ರಣಗಳ ಆರೋಗ್ಯದ ಪರಿಣಾಮಗಳ ಮೇಲೆ ಕೇಂದ್ರೀಕರಿಸಿದೆ. ಈ ಅಧ್ಯಯನಗಳು ಮಾನವನ ಆರೋಗ್ಯದ ಮೇಲೆ ಅಡಿಕೆ ಸೇವನೆಯ ನಿರ್ದಿಷ್ಟ ಪರಿಣಾಮಗಳನ್ನು ಸೂಚಿಸಿಲ್ಲ' ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.