ADVERTISEMENT

ಕಿಡ್ನಿ ಸಮಸ್ಯೆ: ಮನೆಯಲ್ಲೇ ಡಯಾಲಿಸಿಸ್‌ಗೆ ಕೇಂದ್ರ ಯೋಜನೆ

ಪಿಟಿಐ
Published 20 ಮೇ 2019, 19:38 IST
Last Updated 20 ಮೇ 2019, 19:38 IST
   

ನವದೆಹಲಿ: ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಯೋಜನೆಯಡಿ (ಪಿಎಂಎನ್‌ಡಿಪಿ) ಪೆರಿಟೋನಿಯಲ್‌ ಡಯಾಲಿಸಿಸ್‌ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಅಧಿಕೃತವಾಗಿ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರು ಮನೆಯಲ್ಲಿಯೇ ಸ್ವಯಂ ಆಗಿ ಡಯಾಲಿಸಿಸ್‌ ಮಾಡಿಕೊಳ್ಳಬಹುದಾದ ಪೆರಿಟೋನಿಯಲ್‌ ಡಯಾಲಿಸಿಸ್‌ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಸರ್ಕಾರ ಅಧಿಕೃತವಾಗಿ ಜಾರಿಗೆ ತರಲಿದೆ. 2016ರಲ್ಲಿಯೇ ರೂಪಿಸಿರುವ ಈ ಯೋಜನೆಯನ್ನು ಮುಖ್ಯವಾಗಿ ಜಿಲ್ಲಾ ಆಸ್ಪತ್ರೆಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು.

ಪೆರಿಟೋನಿಯಲ್‌ ಡಯಾಲಿಸಿಸ್‌ ಮಾದರಿಯ ಚಿಕಿತ್ಸಾ ವಿಧಾನದಲ್ಲಿ ಹೊಟ್ಟೆಯಲ್ಲಿ ಟ್ಯೂಬ್ ಅಳವಡಿಸಿ ದೇಹಕ್ಕೆ ದ್ರವಾಂಶ ಸೇರಿಸಲಾಗುತ್ತದೆ. ಇದು ಕಿಡ್ನಿಗಳಲ್ಲಿರುವ ಕಲ್ಮಶವನ್ನು ಸುಲಭವಾಗಿ ಹೊರಹಾಕುತ್ತದೆ.

ADVERTISEMENT

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ ಹಿಮೋಡಯಾಲಿಸಿಸ್‌ (ಎಚ್‌ಡಿ) ಮತ್ತು ಪೆರಿಟೋನಿಯಲ್‌ ಡಯಾಲಿಸಿಸ್‌ (ಪಿಡಿ) ಎಂಬ ಎರಡು ಬಗೆಯ ಚಿಕಿತ್ಸಾ ವಿಧಾನಗಳಿವೆ. ಎಚ್‌ಡಿ ಚಿಕಿತ್ಸೆಗೆ ಎರಡು ಮತ್ತು ಮೂರು ವಾರಗಳಿಗೊಮ್ಮೆ ಆಸ್ಪತ್ರೆಗೆ ಹೋಗುವುದು ಅನಿವಾರ್ಯ.

‘ಪಿಡಿ ವಿಧಾನದ ಮೂಲಕ ಡಯಾಲಿಸಿಸ್‌ ಮಾಡಿಕೊಳ್ಳುವುದರಿಂದ ವೆಚ್ಚ ಕಡಿಮೆಯಾಗಲಿದೆ. ಡಯಾಲಿಸಿಸ್‌ಗಾಗಿ ಆಸ್ಪತ್ರೆಗಳಿಗೆ ಹೋಗಿ ಬರುವ ಪ್ರಯಾಸ ತಪ್ಪಲಿದ್ದು, ಸಮಯದ ಉಳಿತಾಯ ವಾಗಲಿದೆ.ಆಸ್ಪತ್ರೆಯ ನಿರ್ವಹಣೆ ಮತ್ತು ಸಿಬ್ಬಂದಿ ವೆಚ್ಚಕ್ಕೂ ಕಡಿವಾಣ ಹಾಕಬಹುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಐದು ವರ್ಷಗಳಿಗಿಂತ ಕಡಿಮೆ ಮಕ್ಕಳಿಗೆ ಎಚ್‌ಡಿ ಡಯಾಲಿಸಿಸ್‌ ಮಾಡಿಸುವುದು ಸೂಕ್ತವಲ್ಲ. ಮಕ್ಕಳ ಜೀವನಶೈಲಿ, ಶಿಕ್ಷಣವನ್ನು ಗಮನದಲ್ಲಿರಿಸಿಕೊಂಡು ಪಿಡಿ ಚಿಕಿತ್ಸಾ ವಿಧಾನಕ್ಕೆ ಆದ್ಯತೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.