ಧನಂಜಯ ಮುಂಡೆ
ಚಿತ್ರ: ಎಕ್ಸ್
ಮುಂಬೈ: ‘ಕಳೆದ ಕೆಲ ದಿನಗಳಿಂದ ಆರೋಗ್ಯ ಹದಗೆಟ್ಟಿದ್ದು, ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದು ಎನ್‌ಸಿಪಿ(ಅಜಿತ್ ಪವಾರ್) ನಾಯಕ ಧನಂಜಯ ಮುಂಡೆ ಅವರು ಹೇಳಿದ್ದಾರೆ.
ಸರಪಂಚ್ ಸಂತೋಷ್ ದೇಶ್‌ಮುಖ್ ಪ್ರಕರಣದಲ್ಲಿ ತಮ್ಮ ಆಪ್ತ ವಾಲ್ಮಿಕ್ ಕರಾಡ್ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಿ ನ್ಯಾಯಾಲಯಕ್ಕೆ ಸಿಐಡಿ ದೋಷಾರೋಪಪಟ್ಟಿ ಸಲ್ಲಿಸಿದ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಧನಂಜಯ ರಾಜೀನಾಮೆ ನೀಡಿದ್ದರು.
ರಾಜೀನಾಮೆ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ವೈದ್ಯಕೀಯ ಕಾರಣಗಳಿಗಾಗಿ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ.
‘ಎಲ್ಲೆಡೆ ಹರಿದಾಡುತ್ತಿರುವ ಕೆಲ ವಿಡಿಯೊ ಮತ್ತು ಫೋಟೊಗಳು ಮಾನಸಿಕವಾಗಿ ತುಂಬಾ ಹಿಂಸೆ ಕೊಡುತ್ತಿದ್ದವು. ಇದರಿಂದ ಆರೋಗ್ಯವು ಹದಗೆಟ್ಟಿತ್ತು’ ಎಂದು ಹೇಳಿದ್ದಾರೆ.
‘ಆರೋಗ್ಯ ಸರಿಯಿಲ್ಲದ ಕಾರಣ ಮುಂದಿನ ಕೆಲವು ದಿನಗಳವರೆಗೆ ಚಿಕಿತ್ಸೆಗೆ ಒಳಗಾಗುವಂತೆ ವೈದ್ಯರು ಸಲಹೆ ನೀಡಿದ್ದಾರೆ. ವೈದ್ಯಕೀಯ ಕಾರಣಕ್ಕೆ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ’ ಎಂದು ತಿಳಿಸಿದ್ದಾರೆ.
ಸರಪಂಚ್ ಹತ್ಯೆ ಪ್ರಕರಣ ಸಂಬಂಧಪಟ್ಟಂತೆ ಧನಂಜಯ ಮುಂಡೆ ಅವರು ರಾಜೀನಾಮೆ ನೀಡುವಂತೆ ವಿಪಕ್ಷಗಳು ಆಗ್ರಹಿಸಿದ್ದವು. ರಾಜೀನಾಮೆ ನೀಡುವಂತೆ ಸ್ವತಃ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಧನಂಜಯ ಅವರಲ್ಲಿ ಕೇಳಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಮಂಗಳವಾರ ಅವರು ರಾಜೀನಾಮೆ ನೀಡಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಸರಪಂಚ್ ದೇಶ್‌ಮುಖ್ ಅವರನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ಹಣ ವಸೂಲಿಗೆ ಅಡ್ಡಿಪಡಿಸಿದ್ದರಿಂದ ಈ ಕೊಲೆ ನಡೆದಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.