ADVERTISEMENT

ಹೆಲಿಕಾಪ್ಟರ್ ಪತನ: ಯೋಧರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಆಂಬುಲೆನ್ಸ್ ಅಪಘಾತ

ಡೆಕ್ಕನ್ ಹೆರಾಲ್ಡ್
Published 9 ಡಿಸೆಂಬರ್ 2021, 11:34 IST
Last Updated 9 ಡಿಸೆಂಬರ್ 2021, 11:34 IST
ಅಪಘಾತಕ್ಕೀಡಾದ ವಾಹನ
ಅಪಘಾತಕ್ಕೀಡಾದ ವಾಹನ   

ಚೆನ್ನೈ: ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ ಪತನಗೊಂಡು ಮೃತಪಟ್ಟ ಯೋಧರ ಪಾರ್ಥಿವ ಶರೀರಗಳನ್ನು ಸಾಗಿಸುತ್ತಿದ್ದ ಆಂಬುಲೆನ್ಸ್ ಮೆಟ್ಟುಪಾಳ್ಯಂ ಸಮೀಪ ಅಪಘಾತಗೊಂಡಿರುವ ಘಟನೆ ಗುರುವಾರ ವರದಿಯಾಗಿದೆ.

ಕೊಯಮತ್ತೂರು ಸಮೀಪದ ಸೂಲೂರಿನಲ್ಲಿರುವ ಭಾರತೀಯ ವಾಯುಪಡೆಯ ನೆಲೆಗೆ ಪಾರ್ಥಿವ ಶರೀರ ಸಾಗಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಪಾರ್ಥಿವ ಶರೀರದೊಂದಿಗೆ ತೆರಳುತ್ತಿದ್ದ ವಾಹನವು ಮತ್ತೊಂದು ಆಂಬುಲೆನ್ಸ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣವೇ ಹೆಚ್ಚು ತಡಮಾಡದೆ ಮೃತದೇಹವನ್ನು ಮತ್ತೊಂದು ವಾಹನಕ್ಕೆ ಸ್ಥಳಾಂತರಿಸಲಾಯಿತು.

ಸೇನಾ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪಾರ್ಥಿವ ಶರೀರವನ್ನು ಸಾಗಿಸುವ ವಾಹನದ ಜೊತೆಯಲ್ಲಿ ಸಾಗುತ್ತಿದ್ದ ಪೊಲೀಸ್ ಬೆಂಗಾವಲು ಪಡೆಯ ಮತ್ತೊಂದು ವಾಹನ ಕೂಡ ಕೂನೂರು ಬಳಿ ಅಪಘಾತಕ್ಕೀಡಾಯಿತು. ಘಟನೆಯಲ್ಲಿ ಐವರು ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮೃತದೇಹಗಳನ್ನು ವೆಲ್ಲಿಂಗ್ಟನ್‌ನಲ್ಲಿರುವ ಮದ್ರಾಸ್ ರೆಜಿಮೆಂಟಲ್ ಸೆಂಟರ್‌ನಿಂದ ಕೊಯಮತ್ತೂರು ಬಳಿಯ ಸೂಲೂರಿನ ಐಎಎಫ್‌ನ ವಾಯುನೆಲೆಗೆ ಸ್ಥಳಾಂತರಿಸಲಾಯಿತು. ಎರಡು ಸ್ಥಳಗಳ ನಡುವಣ ಅಂತರ 90 ಕಿ.ಮೀ. ಆಗಿದ್ದು, ಎರಡೂವರೆ ತಾಸುಗಳ ಪ್ರಯಾಣ ಅದಾಗಿತ್ತು.

ಡಿ.8 ಬುಧವಾರ ಮಧ್ಯಾಹ್ನ ಭಾರತೀಯ ವಾಯುಪಡೆಯ ಎಂಐ–17ವಿ5 ಹೆಲಿಕಾಪ್ಟರ್‌ ಪತನಗೊಂಡಿತು. ಈ ದುರಂತದಲ್ಲಿ, ಸೇನಾ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್ ರಾವತ್‌ (63), ಅವರ ಪತ್ನಿ ಮಧುಲಿಕಾ, 7 ಅಧಿಕಾರಿಗಳು ಹಾಗೂ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.