ADVERTISEMENT

ತಮಿಳುನಾಡಿನಲ್ಲಿ ಭಾರೀ ಮಳೆ: 25 ಸಾವು, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ 

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 19:16 IST
Last Updated 2 ಡಿಸೆಂಬರ್ 2019, 19:16 IST
ಜಲಾವೃತವಾಗಿರುವ ಮಾಮಲ್ಲಪುರಂ ರಸ್ತೆ
ಜಲಾವೃತವಾಗಿರುವ ಮಾಮಲ್ಲಪುರಂ ರಸ್ತೆ   

ಚೆನ್ನೈ: ತಮಿಳುನಾಡಿನ ಹಲವೆಡೆ ಶನಿವಾರದಿಂದ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ವಿವಿಧೆಡೆ ಸಂಭವಿಸಿದ ದುರ್ಘಟನೆಗಳಲ್ಲಿ ಈವರೆಗೆ ಒಟ್ಟಾರೆ 25 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು ಒಂದು ಸಾವಿರ ಮಂದಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯದಲ್ಲಿ ಸೋಮವಾರ ನಸುಕಿನಲ್ಲಿ 15 ಅಡಿ ಎತ್ತರದ ಕಾಂಪೌಂಡ್‌ ಮೂರು ಮನೆಗಳ ಮೇಲೆ ಬಿದ್ದ ಪರಿಣಾಮ ಮನೆಯೊಳಗೆ ಮಲಗಿದ್ದ ಇಬ್ಬರು ಮಕ್ಕಳು, 10 ಮಂದಿ ಮಹಿಳೆಯರು ಸೇರಿ 17 ಮಂದಿ ಸಾವನ್ನಪ್ಪಿದ್ದಾರೆ.

ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸುಮಾರು 58 ಜಾನುವಾರುಗಳು ಬಲಿಯಾಗಿವೆ. 1,700ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಕೂನೂರ್‌– ಮೆಟ್ಟುಪಾಳ್ಯ ಮಧ್ಯೆ 12 ಕಡೆ ಭೂಕುಸಿತವಾಗಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ADVERTISEMENT

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಗಳಿಗೆ ಒಳಹರಿವು ಗಣನಿಯವಾಗಿ ಹೆಚ್ಚಿದೆ. ಕೆರೆ ಕಟ್ಟೆಗಳೆಲ್ಲ ಭರ್ತಿಯಾಗುವ ಹಂತಕ್ಕೆ ಬಂದಿವೆ. ಜಲಾಶಯಗಳ ಮೇಲೆ ಸತತ ನಿಗಾ ಇಡುವಂತೆ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಭವಾನಿ ನದಿಯ ನೀರಿನ ಪ್ರಮಾಣ ಅಪಾಯ ಮಟ್ಟಕ್ಕೆ ಏರಿದೆ. ಈ ನದಿಗೆ ನಿರ್ಮಿಸಿರುವ ಅಣೆಕಟ್ಟೆ ಭರ್ತಿ
ಯಾಗಿದ್ದು, 11,950 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದಾಗಿ ಈರೋಡ್‌ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಮಳೆ ಕಾರಣ ಮದ್ರಾಸ್ ಯುನಿವರ್ಸಿಟಿ ಮತ್ತು ಅಣ್ಣಾ ಯುನಿವರ್ಸಿಟಿಯಲ್ಲಿ ಸೋಮವಾರ ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಕಳೆದ 36 ಗಂಟೆಗಳಲ್ಲಿ ಚೆನ್ನೈಯಲ್ಲಿ 9 ಸೆ.ಮೀ ಮಳೆಯಾಗಿದ್ದು, ಮಳೆ ಮುಂದುವರಿದಿರುವ ಕಾರಣ ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತಮಿಳುನಾಡು ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ಪ್ರಕಾರ ಚೆಂಗಲ್‌ಪೇಟ್, ತಿರುವಳ್ಳೂರ್, ರಾಮನಾಥಪುರ, ತೂತ್ತುಕುಡಿ, ಮತ್ತು ಕಡಲೂರ್ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.