ADVERTISEMENT

ಪಶ್ಚಿಮ ಭಾರತದತ್ತ ಮುಂಗಾರು: ರಾಜಸ್ಥಾನ, ಗುಜರಾತ್‌ನಲ್ಲಿ ಭಾರಿ ಮಳೆ

ಪಿಟಿಐ
Published 28 ಜುಲೈ 2019, 11:36 IST
Last Updated 28 ಜುಲೈ 2019, 11:36 IST
ಜಮ್ಮುವಿನಲ್ಲಿ ಸುರಿದ ಭಾರಿ ಮಳೆಯ ನಂತರ ತುಂಬಿ ಹರಿಯುತ್ತಿರುವ ತಾವಿ ನದಿಯನ್ನು ವ್ಯಕ್ತಿಯೊಬ್ಬರು ವೀಕ್ಷಿಸಿದರು –ಪಿಟಿಐ ಚಿತ್ರ
ಜಮ್ಮುವಿನಲ್ಲಿ ಸುರಿದ ಭಾರಿ ಮಳೆಯ ನಂತರ ತುಂಬಿ ಹರಿಯುತ್ತಿರುವ ತಾವಿ ನದಿಯನ್ನು ವ್ಯಕ್ತಿಯೊಬ್ಬರು ವೀಕ್ಷಿಸಿದರು –ಪಿಟಿಐ ಚಿತ್ರ   

ಮುಂಬೈ,ಜೈಪುರ, ನವದೆಹಲಿ:ಮುಂಬೈನಲ್ಲಿ ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಿಗ್ಗೆಯೂ ಭಾರಿ ಮಳೆಯಾಗಿದೆ. ಸೋಮವಾರ ಬೆಳಿಗ್ಗೆವರೆಗೆ ಮುಂಬೈ, ಠಾಣೆ ಮತ್ತು ರತ್ನಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದೇ ವೇಳೆ ಉತ್ತರ ಭಾರತದಲ್ಲಿನ ಮಳೆ ಮಾರುತಗಳು ಪಶ್ಚಿಮ ಭಾರತದತ್ತ ತಿರುಗಿವೆ. ಶನಿವಾರ ತಡರಾತ್ರಿಯಿಂದ ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಭಾರಿ ಮಳೆಯಾಗುತ್ತಿದೆ.

ರಾಜಸ್ಥಾನದ ಕೋಟಾ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದು, ಅಲ್ಲಲ್ಲಿ ನೆರೆಯ ಸ್ಥಿತಿ ನಿರ್ಮಾಣವಾಗಿತ್ತು. ಕೋಟಾದಲ್ಲಿ ಜಲಾವೃತವಾಗಿದ್ದ ವಸತಿ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ADVERTISEMENT

ರಾಜಸ್ಥಾನದಲ್ಲಿ ಭಾನುವಾರ ರಾತ್ರಿಯೂ ಭಾರಿ ಮಳೆಯಾಗಲಿದೆ. ಹೀಗಾಗಿ ಯಾವುದೇ ಪರಿಸ್ಥಿತಿ ಎದುರಿಸಲು ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಜ್ಜಾಗಿದೆ ಎಂದು ಮೂಲಗಳು ಹೇಳಿವೆ.

ದಕ್ಷಿಣ ಗುಜರಾತ್‌ ಮತ್ತು ಸೌರಾಷ್ಟ್ರದಲ್ಲಿ ಭಾನುವಾರ ಮತ್ತು ಸೋಮವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ದೆಹಲಿಯಲ್ಲಿ ಇಳಿದ ಮಳೆ

ಶನಿವಾರ ರಾತ್ರಿಯಿಂದ ನವದೆಹಲಿಯಲ್ಲಿ ಮಳೆಯ ಬಿರುಸು ಕಡಿಮೆಯಾಗಿದೆ. ಇನ್ನೂ ಎರಡು ಅಥವಾ ಮೂರು ದಿನ ಇದೇ ಪರಿಸ್ಥಿತಿ ಇರಲಿದೆ. ಜುಲೈ 31ರ ನಂತರ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

* ಗೋವಾ, ಕೊಂಕಣ ತೀರ, ಮಹಾರಾಷ್ಟ್ರ ಕರಾವಳಿ, ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ

* ಜಮ್ಮುವಿನಲ್ಲಿ ಭಾರಿ ಮಳೆ ಮತ್ತು ಹಿಮಪಾತದ ಕಾರಣ ಅಮರನಾಥ ಯಾತ್ರೆ ರದ್ದು

* ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಮುರ್ಬಾದ್–ಕಲ್ಯಾಣ್ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಉಲ್ಲಾಸ್ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ

* ಮುಂಬೈನಿಂದ ಹೊರಡಬೇಕಿದ್ದ ಹಲವು ರೈಲುಗಳು ರದ್ದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.