ADVERTISEMENT

ಮುಂಬೈ: ಸತತ ಮಳೆ, ಸ್ಥಳೀಯ ರೈಲುಗಳು ವಿಳಂಬ

ಪಿಟಿಐ
Published 7 ಜುಲೈ 2022, 14:40 IST
Last Updated 7 ಜುಲೈ 2022, 14:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಸತತ ನಾಲ್ಕನೇ ದಿನವೂಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗೋಡೆಯೊಂದು ಹಳಿಯ ಮೇಲೆ ಕುಸಿದಿರುವುದರಿಂದ ಸ್ಥಳೀಯ ರೈಲು ಸೇವೆಗಳಲ್ಲಿ ವಿಳಂಬವಾಗಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.

‘ದಕ್ಷಿಣ ಮುಂಬೈನ ಮಸೀದಿ ಮತ್ತು ಸ್ಯಾಂಡ್‌ಹರ್ಸ್ಟ್ ರಸ್ತೆ ನಿಲ್ದಾಣಗಳ ನಡುವೆ ಹಾರ್ಬರ್ ಲೈನ್‌ನ ಕೆಳಗೆ ಇರುವ (ಉತ್ತರ-ಬೌಂಡ್) ಮಾರ್ಗದಲ್ಲಿನ ಗೋಡೆಯ ಒಂದು ಸಣ್ಣ ಭಾಗವು ಕುಸಿದಿದ್ದು, ರೈಲು ಸಂಚಾರದ ಮೇಲೆ ಪರಿಣಾಮ ಬೀರಿದೆ.ಮುಂಬೈ ಮತ್ತು ನೆರೆಯ ಠಾಣೆ ಜಿಲ್ಲೆಯಲ್ಲಿ ಮಳೆಯಿಂದಾಗಿ ಉಪನಗರ ಸೇವೆಗಳು ಕೆಲವು ನಿಮಿಷಗಳ ಕಾಲ ವಿಳಂಬವಾಗಿವೆ’ ಎಂದು ಕೇಂದ್ರ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ಗುರುವಾರ ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಸೂಚನೆ ನೀಡಿದೆ. ಅಲ್ಲದೇ, ಗಾಳಿಯೂ ಸಹ 40-50 ಕಿ.ಮೀ ವೇಗದಲ್ಲಿ ಪ್ರಾರಂಭವಾಗಿ 60 ಕಿ.ಮೀ ವರೆಗೂ ತಲುಪುವ ಸಾಧ್ಯತೆಯನ್ನುಹವಾಮಾನ ಇಲಾಖೆ ತಿಳಿಸಿದೆ ಎಂದು ಪೌರಾಡಳಿತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ADVERTISEMENT

ದಕ್ಷಿಣ ಗುಜರಾತ್, ಸೌರಾಷ್ಟ್ರದಲ್ಲೂ ಮಳೆ:

ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರ ಪ್ರದೇಶದ ಕೆಲವು ಭಾಗಗಳಲ್ಲಿ ಗುರುವಾರ ಭಾರಿ ಮಳೆ ಸುರಿದಿದ್ದು, ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ. ‌

ದಕ್ಷಿಣ ಪಾಕಿಸ್ತಾನದಲ್ಲಿನ ಕಡಿಮೆ ಒತ್ತಡ ಹಾಗೂ ಚಂಡಮಾರುತದ ಪರಿಚಲನೆಯಿಂದಾಗಿ ನೈಋತ್ಯ ಮಾನ್ಸೂನ್ ಈಗ ರಾಜ್ಯದಾದ್ಯಂತ ಸಕ್ರಿಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂದಿನ ನಾಲ್ಕು ದಿನಗಳಲ್ಲಿ ರಾಜ್ಯದ ಬಹುತೇಕ ಸ್ಥಳಗಳಲ್ಲಿ ಹಗುರ, ಸಾಧಾರಣ ಮಳೆ ಹಾಗೂ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.ಜುಲೈ 11 ರಂದು ಕಚ್ ಪ್ರದೇಶದ ವಿವಿಧ ಸ್ಥಳಗಳಲ್ಲಿ ಅತ್ಯಂತ ಹೆಚ್ಚು ಮಳೆಯಾಗಲಿದೆ ಎಂದು ಎಂದುಹವಾಮಾನ ಇಲಾಖೆ ತಿ‌ಳಿಸಿದೆ.

ಗುಜರಾತ್ ಕರಾವಳಿಯ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಎಚ್ಚರಿಕೆ ವಹಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಸರ್ಕಾರವು ಮೀನುಗಾರರಿಗೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.