ADVERTISEMENT

ಮುಂಬೈ: ಭಾರಿ ಮಳೆ, ಪ್ರವಾಹ ತಡೆಯುವ ಭೂಗತ ನೀರಿನ ಟ್ಯಾಂಕ್‌ ವ್ಯವಸ್ಥೆಗೆ ಸಿಎಂ ಶ್ಲಾಘನೆ

ಪಿಟಿಐ
Published 25 ಜೂನ್ 2023, 10:17 IST
Last Updated 25 ಜೂನ್ 2023, 10:17 IST
ಏಕನಾಥ ಶಿಂದೆ
ಏಕನಾಥ ಶಿಂದೆ    

ಮಹಾರಾಷ್ಟ್ರ: ಮುಂಬೈ ನಗರದಲ್ಲಿ ಈ ಋತುವಿನ ಮೊದಲ ಮಳೆಯಾಗುತ್ತಿದ್ದಂತೆ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಪ್ರವಾಹವನ್ನು ತಡೆಗಟ್ಟಲು ನಗರದ ಮಿಲನ್‌ ಸುರಂಗ ಮಾರ್ಗದಲ್ಲಿ ಸ್ಥಾಪಿಸಲಾದ ಭೂಗತ ನೀರಿನ ಟ್ಯಾಂಕ್‌ನ ಕಾರ್ಯನಿರ್ವಹಣೆಯನ್ನು ಭಾನುವಾರ ಪರಿಶೀಲಿಸಿದರು.

ಮಿಲನ್‌ ಸುರಂಗಮಾರ್ಗ, ಹಿಂದ್ಮಾತಾ ಮತ್ತು ಮುಂಬೈನ ಇತರ ಕೆಲವು ಸ್ಥಳಗಳು ಪ್ರತಿ ವರ್ಷ ಮಳೆಯ ಸಮಯದಲ್ಲಿ ನೀರಿನಿಂದ ತುಂಬಿಕೊಳ್ಳುತ್ತವೆ. ಈ ಪ್ರದೇಶಗಳಲ್ಲಿ ಪ್ರವಾಹವನ್ನು ತಡೆಗಟ್ಟಲು ಬೃಹನ್‌ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಭೂಗತ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಿದೆ.

ಕಳೆದ 24 ಗಂಟೆಗಳಲ್ಲಿ ಮುಂಬೈ ಮತ್ತು ಅದರ ಉಪನಗರಗಳಲ್ಲಿ ಭಾರಿ ಮಳೆಯಾಗಿದೆ. ಇದರಿಂದಾಗಿ ವಿವಿಧ ಸ್ಥಳಗಳಲ್ಲಿ ನೀರು ನಿಂತಿದೆ ಮತ್ತು ಕೆಲವು ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ತೊಡಕಾಗಿದೆ.

ADVERTISEMENT

‘ಮಿಲನ್‌ ಸುರಂಗಮಾರ್ಗದ ಪರಿಸ್ಥಿತಿಯನ್ನು ಪರಿಶೀಲಿಸಲು ನಾನು ಖುದ್ದಾಗಿ ಬಂದಿದ್ದೇನೆ. ಒಂದು ಗಂಟೆಯಲ್ಲಿ 70 ಮಿ.ಮೀ ಗಿಂತ ಹೆಚ್ಚು ಮಳೆಯಾಗಿದೆ ಎಂದು ವರದಿಯಾಗಿದೆ, ನಾವು ಅಭಿವೃದ್ಧಿ ಪಡಿಸಿರುವ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಾಬೀತಾಗಿದೆ ಎಂದು ಶಿಂದೆ ಸುದ್ದಿಗಾರರಿಗೆ ತಿಳಿಸಿದರು.

‘ಅಂತಹ ವಿಪರೀತ ಮಳೆಯ ಹೊರತಾಗಿಯೂ, ಮಿಲನ್‌ ಸುರಂಗಮಾರ್ಗವು ವಾಹನ ಸಂಚಾರಕ್ಕೆ ಮುಕ್ತವಾಗಿತ್ತು. ಇದೇ ರೀತಿಯ ವ್ಯವಸ್ಥೆಗಳು ಮುಂಬೈನ ಇತರ ಪ್ರದೇಶಗಳಲ್ಲಿಯೂ ಕಾರ್ಯನಿರ್ವಹಿಸುತ್ತವೆ’ ಎಂದು ಶಿಂದೆ ಹೇಳಿದರು.

ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲು ಬಿಎಂಸಿ ಅಧಿಕಾರಿಗಳಿಗೆ ಸಿಎಂ ಆದೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.