ADVERTISEMENT

ಮುಂಬೈನಲ್ಲಿ ಭಾರಿ ಮಳೆ: ರೈಲು ಸಂಚಾರ ವಿಳಂಬ

ಹಲವೆಡೆ ರಸ್ತೆಗಳು ಜಲಾವೃತ: ವಾಹನ ಸಂಚಾರಕ್ಕೆ ತೊಡಕು

ಪಿಟಿಐ
Published 5 ಜುಲೈ 2022, 11:43 IST
Last Updated 5 ಜುಲೈ 2022, 11:43 IST
ಕುರ್ಲಾ– ತಿಲಕನಗರ ನಡುವಿನ ಮಾರ್ಗದ ರೈಲು ಹಳಿ ಮಂಗಳವಾರ ಕೆಲವೆಡೆ ಜಲಾವೃತವಾಗಿತ್ತು –ಪಿಟಿಐ ಚಿತ್ರ
ಕುರ್ಲಾ– ತಿಲಕನಗರ ನಡುವಿನ ಮಾರ್ಗದ ರೈಲು ಹಳಿ ಮಂಗಳವಾರ ಕೆಲವೆಡೆ ಜಲಾವೃತವಾಗಿತ್ತು –ಪಿಟಿಐ ಚಿತ್ರ   

ಮುಂಬೈ: ಮುಂಬೈ ಮತ್ತು ಸಮೀಪ ಪ್ರದೇಶಗಳಲ್ಲಿ ಮಂಗಳವಾರ ಭಾರಿ ಮಳೆಯಾಗಿದ್ದು, ಹಲವೆಡೆ ರೈಲು ಹಳಿಗಳು ಹಾಗೂ ತಗ್ಗು ಪ್ರದೇಶಗಳು ಜಲಾವೃತವಾಗಿವೆ.

ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದ ಕಾರಣ ವಿವಿಧೆಡೆ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು. ರೈಲುಗಳ ಸಂಚಾರವೂ ವಿಳಂಬವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಮುಂಬೈನಲ್ಲಿ ಸರಾಸರಿ 95.81 ಮಿ.ಮೀ. ಮಳೆಯಾಗಿದೆ. ಇದೇ ಅವಧಿಯಲ್ಲಿ ಪೂರ್ವ ಮತ್ತು ಪಶ್ಚಿಮ ಉಪನಗರಗಳಲ್ಲಿ ಕ್ರಮವಾಗಿ 115.09 ಮಿ.ಮೀ ಹಾಗೂ 116.73 ಮಿ.ಮೀ ಮಳೆಯಾಗಿದೆ ಎಂದೂ ವಿವರಿಸಿದ್ದಾರೆ.

ADVERTISEMENT

ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ 11.30 ರ ನಡುವಿನ ಅವಧಿಯಲ್ಲಿ ದಕ್ಷಿಣ ಮುಂಬೈನಲ್ಲಿ ಸರಾಸರಿ 41ಮಿ.ಮೀ ಹಾಗೂ ಪೂರ್ವ ಮತ್ತು ಪಶ್ಚಿಮ ಉಪನಗರಗಳಲ್ಲಿ ಕ್ರಮವಾಗಿ 85 ಮಿ.ಮೀ ಮತ್ತು 55 ಮಿ.ಮೀ ಮಳೆಯಾಗಿದೆ ಎಂದು ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ.

ಸಿಯೋನ್‌, ಕುರ್ಲಾ, ತಿಲಕ ನಗರ ಮತ್ತು ವಡಾಲಾ ಪ್ರದೇಶಗಳಲ್ಲಿ ಹಳಿಗಳು ಜಲಾವೃತವಾಗಿದ್ದರಿಂದ ಲೋಕಲ್‌ ರೈಲುಗಳ ಸಂಚಾರ ವಿಳಂಬ ವಿಳಂಬವಾಯಿತು ಎಂದಿದ್ದಾರೆ.

ಪನ್ವೇಲ್, ಖಂಡೇಶ್ವರಿ ಮತ್ತು ಮಾನಸ ಸರೋವರ ರೈಲು ನಿಲ್ದಾಣಗಳ ಸುರಂಗ ಮಾರ್ಗಗಳಲ್ಲೂ ಮಳೆ ನೀರು ಸಂಗ್ರಹಗೊಂಡಿತ್ತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ಸಿಯೋನ್‌ ಪ್ರದೇಶದ ಸಾಧನಾ ಪ್ರೌಢಶಾಲೆಯ ಬಳಿಯ ರಸ್ತೆಯಲ್ಲಿ 1.5 ಅಡಿಗಳಷ್ಟು ನೀರು ನಿಂತಿದ್ದು, ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಸಾಂತಾಕ್ರೂಜ್‌ ರೈಲು ನಿಲ್ದಾಣದ ಬಳಿಯ ರಸ್ತೆಯಲ್ಲಿ ಒಂದು ಅಡಿಯಷ್ಟು ನೀರು ಸಂಗ್ರಹಗೊಂಡಿತ್ತು. ದಾದರ್‌ ಟಿ.ಟಿ, ಸಕ್ಕರ್ ಪಂಚಾಯತ್ ವೃತ್ತ, ಚೆಂಬೂರಿನ ಟೆಂಬಿ ಸೇತುವೆಯ ಬಳಿಯ ರಸ್ತೆಯಲ್ಲೂ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗಿತ್ತು ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.

ನಾಲ್ಕು ಸುರಂಗ ಮಾರ್ಗಗಳು ಬಂದ್‌:

ಭಾರಿ ಮಳೆಯ ಪರಿಣಾಮ ವಾಯವ್ಯ ಉಪನಗರದ ಗೋಲಿಬಾರ್, ಮಿಲನ್, ಅಂಧೇರಿ ಮತ್ತು ಮಲಾಡ್ ಸುರಂಗ ಮಾರ್ಗಗಳನ್ನು ಮುಚ್ಚಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.