ADVERTISEMENT

ಕೇರಳದಲ್ಲಿ ಭಾರಿ ಮಳೆ: ಅಣೆಕಟ್ಟುಗಳು ಭರ್ತಿ, ರಸ್ತೆಗಳು ಜಲಾವೃತ

ಪಿಟಿಐ
Published 14 ನವೆಂಬರ್ 2021, 6:54 IST
Last Updated 14 ನವೆಂಬರ್ 2021, 6:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪತ್ತನಂತಿಟ್ಟ/ಇಡಕ್ಕಿ, ಕೇರಳ: ಕೇರಳದ ಹಲವು ಭಾಗಗಳಲ್ಲಿ ಶನಿವಾರ ರಾತ್ರಿಯಿಂದ ಭಾರಿ ಮಳೆಯಾಗುತ್ತಿದ್ದು, ಅನೇಕ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಭಾನುವಾರ ಬೆಳಗಿನ ಹೊತ್ತಿಗೆ ಹಲವು ರಸ್ತೆಗಳು ಜಲಾವೃತವಾಗಿವೆ.

ಮುಂದಿನ ಎರಡು ದಿನಗಳ ಕಾಲ ರಾಜ್ಯದ ದಕ್ಷಿಣ ಭಾಗಗಳಲ್ಲಿ ಇದೇ ಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಭಾನುವಾರ ಬೆಳಗಿನ ಹೊತ್ತಿಗೆ ಮುಲ್ಲಪೆರಿಯಾರ್ ಅಣೆಕಟ್ಟಿನ ನೀರಿನ ಮಟ್ಟ 140 ಅಡಿ ಮುಟ್ಟಿದೆ ಎಂದು ತಮಿಳುನಾಡು ಸರ್ಕಾರ ಹೇಳಿರುವುದಾಗಿ ಇಡುಕ್ಕಿ ಜಿಲ್ಲಾಡಳಿತ ಹೇಳಿದೆ.

ADVERTISEMENT

ಮುಂದಿನ 24 ಗಂಟೆಗಳಲ್ಲಿ ನೀರಿನ ಮಟ್ಟ ಹೆಚ್ಚಾದರೆ ನೀರನ್ನು ಹೊರಬಿಡಬೇಕಾಗಬಹುದು. ಹೀಗಾಗಿ ಅಣೆಕಟ್ಟು ಪ್ರದೇಶದಲ್ಲಿನ ಜನರು ಎಚ್ಚರಿಕೆಯಿಂದ ಇರಬೇಕು ಎಂದೂ ಅದು ಹೇಳಿದೆ.

ಪತ್ತನಂತಿಟ್ಟ ಜಿಲ್ಲೆಯಲ್ಲೂ ಭಾರಿ ಮಳೆಯಾಗಿದೆ. ನದಿಗಳಲ್ಲಿ ನೀರಿನ ಹರಿವು ಹೆಚ್ಚುವ ಸಾಧ್ಯತೆ ಇರುವುದರಿಂದ ನದಿಯ ತಟಗಳಲ್ಲಿ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಸಂತ್ರಸ್ತ ಶಿಬಿರಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ನಿರಂತರ ಮಳೆಯಿಂದ ಪತ್ತನಂತಿಟ್ಟ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿನ ರಸ್ತೆಗಳು ನೀರಿನಿಂದ ಆವೃತವಾಗಿವೆ. ಈ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಬೆಳಿಗ್ಗೆಯಿಂದ ಕೊಟ್ಟಾಯಂ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ. ಆದರೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.ನಿರಂತರ ಮಳೆಯಿಂದಾಗಿ ಶನಿವಾರ ಕೇರಳದ ಕೆಲವು ಭಾಗಗಳಲ್ಲಿ ಸಣ್ಣ ಭೂಕುಸಿತಗಳು ಮತ್ತು ರೈಲು ಸೇವೆಗಳಿಗೆ ಅಡ್ಡಿಯುಂಟಾಗಿದೆ. ಗುಡ್ಡಗಾಡು ಪ್ರದೇಶಗಳು, ನದಿಯ ಬದಿಗಳು ಮತ್ತು ಪ್ರವಾಸಿ ಕೇಂದ್ರಗಳಲ್ಲಿ ತೀವ್ರ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ರಾಜ್ಯದ ಕೆಲವೆಡೆ ನವೆಂಬರ್‌ 16 ರವರೆಗೆ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.