ರಾಂಚಿ: ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ನಾಯಕ ಹೇಮಂತ್ ಸೊರೇನ್, ಜಾರ್ಖಂಡ್ ರಾಜ್ಯದ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇಂಡಿಯಾ ಬಣದ ಹಲವು ನಾಯಕರು ಕಾರ್ಯಕ್ರಮದಲ್ಲಿ ಸಾಕ್ಷಿಯಾದರು.
49 ವರ್ಷದ ಆದಿವಾಸಿ ನಾಯಕ ಸೊರೇನ್ ಅವರಿಗೆ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಪ್ರತಿಜ್ಞಾವಿಧಿ ಬೋಧಿಸಿದರು.
ರಾಂಚಿಯ ಮೊರಾಬಾದಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಎಪಿ ನಾಯಕ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಜರಿದ್ದರು.
ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಖುರ್ತಾ, ಪೈಜಾಮಾ ಧರಿಸಿ ತಮ್ಮ ತಂದೆ, ಜೆಎಂಎಂ ಅಧ್ಯಕ್ಷ ಶಿಬು ಸೊರೇನ್ ಅವರನ್ನು ಭೇಟಿಯಾದರು.
ಜಾರ್ಖಂಡ್ ಮುಖ್ಯಮಂತ್ರಿಯಾಗಿ 4ನೇ ಬಾರಿಗೆ ಹೇಮಂತ್ ಸೊರೇನ್ ಅಧಿಕಾರದ ಗದ್ದುಗೆ ಏರಿದ್ಧಾರೆ.
ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭೆ ಚುನಾವಣೆಯಲ್ಲಿ ಬರ್ಹೈತ್ ಕ್ಷೇತ್ರದಿಂದ ಬಿಜೆಪಿಯ ಗಮ್ಲಿಯೆಲ್ ಹೆಂಬ್ರೋಮ್ ಅವರನ್ನು 39,791 ಮತಗಳಿಂದ ಮಣಿಸಿ ಶಾಸಕರಾಗಿ ಹೇಮಂತ್ ಮರುಆಯ್ಕೆಯಾಗಿದ್ದರು.
ಜಾರ್ಖಂಡ್ ವಿಧಾನಸಭೆಯ 81 ಕ್ಷೇತ್ರಗಳ ಪೈಕಿ ಜೆಎಂಎಂ ನೇತೃತ್ವದ ಮೈತ್ರಿಕೂಟವು 56 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಎನ್‌ಡಿಎ 24ಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಮೂಲಗಳ ಪ್ರಕಾರ ಮಿತ್ರಪಕ್ಷಗಳು ಸಂಪುಟ ಸೇರುವ ಶಾಸಕರ ಪಟ್ಟಿ ಅಂತಿಮಗೊಳಿಸಿರಲಿಲ್ಲ. ಹೀಗಾಗಿ, ಹೇಮಂತ್ ಒಬ್ಬರೇ ಅಧಿಕಾರ ಸ್ವೀಕರಿಸಿದರು. ಸಂಪುಟ ವಿಸ್ತರಣೆ ಡಿಸೆಂಬರ್‌ನಲ್ಲಿ ನಡೆಯುವ ಸಂಭವವಿದೆ.
ವಿಧಾನಸಭೆಯ ಚುನಾವಣೆಯಲ್ಲಿ ಜೆಎಂಎಂ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ‘ಇಂಡಿಯಾ’ ಮಿತ್ರ ಪಕ್ಷಗಳು ಒಟ್ಟು 81 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ 56 ಸ್ಥಾನಗಳನ್ನು ಗೆದ್ದುಕೊಂಡಿವೆ. ಹೀಗಾಗಿ, ವಿಶ್ವಾಸಮತ ಸಾಬೀತು ಪಡಿಸುವುದು ಔಪಚಾರಿಕವಾದ ಪ್ರಕ್ರಿಯೆಯಾಗಿದೆ.
ಹೇಮಂತ್ 4ನೇ ಬಾರಿಗೆ ಸಿ.ಎಂ ಸವಾಲು ಎದುರಿಸಿ ಗೆದ್ದ ‘ಧೀಮಂತ’
ಬುಡಕಟ್ಟು ಜನರ ನಾಯಕ ಹೇಮಂತ್ ಸೊರೇನ್ ಅವರಿಗೀಗ 49ರ ಹರೆಯ. 4ನೇ ಬಾರಿಗೆ ಸಿ.ಎಂ ಗದ್ದುಗೆಗೆ ಏರಿದ್ದು ಆಡಳಿತದ ಸಾರಥ್ಯ ವಹಿಸಿಕೊಂಡಿದ್ದಾರೆ. ಜೆಎಂಎಂ ಪಕ್ಷದ ಸ್ಥಾಪಕ ಶಿಬು ಸೊರೇನ್ ಅವರ ನಾಲ್ವರು ಪುತ್ರರಲ್ಲಿ ಮೂರನೇಯವರು ಹೇಮಂತ್. 2009ರಲ್ಲಿ ರಾಂಚಿಯ ಬಿರ್ಲಾ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಹೇಮಂತ್ ಬಿ.ಟೆಕ್ ವಿದ್ಯಾರ್ಥಿಯಾಗಿದ್ದರು. ಅಣ್ಣ ಜೆಎಂಎಂ ಶಾಸಕ ದುರ್ಗಾ ಸೊರೇನ್ ಅಕಾಲಿಕವಾಗಿ ನಿಧನರಾಗಿದ್ದರು. ಆಗ ರಾಜಕೀಯ ಪ್ರವೇಶಿಸಿದ್ದ ಹೇಮಂತ್ ಬೇಗನೇ ರಾಜಕೀಯದ ಪಟ್ಟುಗಳನ್ನು ಕಲಿತರು. 2009ರಲ್ಲೇ ರಾಜ್ಯಸಭೆ ಸದಸ್ಯರಾದರು. 2010ರಲ್ಲಿ ಆ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆಗೆ ಸ್ಪರ್ಧಿಸಿದ್ದು ಡುಂಕಾ ಕ್ಷೇತ್ರದಿಂದ ಗೆದ್ದರು. ಬಿಜೆಪಿಯ ಅರ್ಜುನ್ ಮುಂಡಾ ನೇತೃತ್ವದ ಸರ್ಕಾರದಲ್ಲಿ ಕೆಲಕಾಲ ಡಿಸಿಎಂ ಆಗಿದ್ದರು. 2013ರಲ್ಲಿ ಕಾಂಗ್ರೆಸ್ ಆರ್‌ಜೆಡಿ ಬೆಂಬಲದಲ್ಲಿ ಸರ್ಕಾರ ರಚಿಸಿದ್ದು ಮೊದಲ ಬಾರಿಗೆ ಸಿ.ಎಂ ಆದರು. ನಂತರ 2019 ಮತ್ತೊಮ್ಮೆ ಅಧಿಕಾರದ ಗದ್ದುಗೇರಿದರು. 2024ರ ಚುನಾವಣೆಯಲ್ಲೂ ಗೆಲುವಿನ ಹಾದಿಯಲ್ಲಿ ಸಾಗಿದರು. ರಾಜ್ಯದಲ್ಲಿ ಯಾವುದೇ ಪಕ್ಷ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಏರಿರಲಿಲ್ಲ. ಸ್ಪಷ್ಟ ಬಹುಮತದ ಗೆಲುವಿನ ಮೂಲಕ ಈಗ ಆ ಹಿರಿಮೆಯನ್ನು ದಕ್ಕಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.