ADVERTISEMENT

ಗಣೇಶ ಚತುರ್ಥಿ: ದೆಹಲಿ ಸರ್ಕಾರದ ವಿರುದ್ಧದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಪಿಟಿಐ
Published 9 ಸೆಪ್ಟೆಂಬರ್ 2021, 7:52 IST
Last Updated 9 ಸೆಪ್ಟೆಂಬರ್ 2021, 7:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಗಣೇಶ ಚತುರ್ಥಿ ಅಂಗವಾಗಿ ಪೂಜೆಯನ್ನು ಆಯೋಜಿಸಿ, ಈ ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಆಹ್ವಾನಿಸುವುದಕ್ಕಾಗಿ ಜಾಹಿರಾತು ನೀಡಿರುವ ದೆಹಲಿ ಸರ್ಕಾರದ ಕ್ರಮವನ್ನು ಕಾನೂನು ಬಾಹಿರ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಗುರುವಾರ ವಜಾಗೊಳಿಸಿದೆ.

‘ಸೂಕ್ತ ಸಿದ್ಧತೆ, ಅಧ್ಯಯನವಿಲ್ಲದೇ, ತರಾತುರಿಯಲ್ಲಿ ಈ ಅರ್ಜಿ ಸಲ್ಲಿಸಲಾಗಿದೆ‘ ಎಂದು ಹೇಳಿರುವ ಮುಖ್ಯ ನ್ಯಾಯ ಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್‌ ಅವರನ್ನೊಳಗೊಂಡ ಪೀಠ, ಈ ಅರ್ಜಿಯನ್ನು ಹಿಂದಕ್ಕೆ ಪಡೆಯಲು ಅರ್ಜಿದಾರರಿಗೆ ಅವಕಾಶ ನೀಡಿದೆ. ಹಾಗೆಯೇ, ಕಾನೂನಿನ ಅನುಸಾರವಾಗಿ, ಸೂಕ್ತ ದಾಖಲೆಗಳೊಂದಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯವನ್ನೂ ನೀಡಿದೆ.

ಅರ್ಜಿದಾರ ವಕೀಲ ಮನೊಹಾಲ್‌ ಲಾಲ್‌ ಶರ್ಮಾ, ‘ದೆಹಲಿ ಸರ್ಕಾರ ಸೆ.10ರಂದು ಗಣೇಶ ಪೂಜೆ ಆಯೋಜಿಸಿದ್ದು, ಅದಕ್ಕೆ ಸಾರ್ವಜನಿಕರು ಆಗಮಿಸುವಂತೆ ಆಹ್ವಾನ ನೀಡಿದೆ ಎಂಬ ವಿಚಾರ ಮಾಧ್ಯಮದ ಮೂಲಕ ತಿಳಿಯಿತು‘ ಎಂದು ಹೇಳಿದರು.

ADVERTISEMENT

‘ಸರ್ಕಾರ ಧಾರ್ಮಿಕ ಕಾರ್ಯಕ್ರಮವನ್ನು ನಡೆಸುವುದು ಮತ್ತು ಅದನ್ನು ಉತ್ತೇಜಿಸುವುದು ಹಾಗೂ ಇದಕ್ಕಾಗಿ ಟಿವಿಗಳ ಮೂಲಕ ಜಾಹಿರಾತು ನೀಡುವುದು ಸಂವಿಧಾನದ ವಿಧಿ 21(ವೈಯಕ್ತಿಕ ಜೀವನ ಮತ್ತು ವೈಯಕ್ತಿಕ ಸ್ವಾಂತಂತ್ರ್ಯದ ರಕ್ಷಣೆ), 25(ಧಾರ್ಮಿಕ ಸ್ವಾಂತ್ರ್ಯ ಹಕ್ಕು) ಮತ್ತು 14(ಕಾನೂನಿನ ಎದುರು ಎಲ್ಲರೂ ಸಮಾನರು) ಮತ್ತು ಜಾತ್ಯತೀತ ತತ್ವವನ್ನು ಉಲ್ಲಂಘಿಸಿದಂತಾಗುತ್ತದೆ‘ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ತನ್ನ ರಾಜಕೀಯ ಮತ್ತು ಚುನಾವಣಾ ಲಾಭಕ್ಕಾಗಿ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಸರ್ಕಾರ ಧನಸಹಾಯ ಮಾಡುತ್ತಿರುವುದನ್ನು ನಿಲ್ಲಿಸಲು ಸೂಚಿಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.