ADVERTISEMENT

ಮಥುರಾ: ಮಸೀದಿ ತೆರವು ಕೋರಿದ್ದ ಅರ್ಜಿ ವಿಚಾರಣೆಗೆ ಹೈಕೋರ್ಟ್ ಅಂಗೀಕಾರ

ಪಿಟಿಐ
Published 13 ಮಾರ್ಚ್ 2022, 10:47 IST
Last Updated 13 ಮಾರ್ಚ್ 2022, 10:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಲಹಾಬಾದ್: ‘ಮಥುರಾದಲ್ಲಿಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿರುವ ಶಾಹಿ ಈದ್ಗಾ ಮಸೀದಿ ತೆರವುಗೊಳಿಸಬೇಕು’ ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ವಿಚಾರಣೆಗೆ ಮಾನ್ಯ ಮಾಡಿದೆ.

ಅರ್ಜಿದಾರರು ವಕೀಲರ ಮೂಲಕ ಹಾಜರಾಗದೇ, ವ್ಯಕ್ತಿಗತವಾಗಿ ಹಾಜರಾಗಿದ್ದಾರೆ ಎಂಬ ಕಾರಣ ನೀಡಿ ಈ ಹಿಂದೆ ಮೂಲ ಅರ್ಜಿಯನ್ನು 2021ರ ಜನವರಿ 19ರಂದು ವಜಾ ಮಾಡಲಾಗಿತ್ತು. ಹಿಂದೆಯೇ, ಮರುಸ್ಥಾಪನೆ ಕೋರಿದ್ದ ಅರ್ಜಿ ಸಲ್ಲಿಸಲಾಗಿತ್ತು.

ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌ ಮತ್ತು ನ್ಯಾಯಮೂರ್ತಿ ಪ್ರಕಾಶ್‌ ಪಾಡಿಯಾ ಅವರಿದ್ದ ವಿಭಾಗೀಯ ಪೀಠವು, ‘ವಿಳಂಬವಿಲ್ಲದೇ ಮತ್ತೆ ಅರ್ಜಿ ಸಲ್ಲಿಸಿದ್ದರಿಂದ ವಿಚಾರಣೆಗೆ ಮಾನ್ಯ ಮಾಡಲಾಗಿದೆ’ ಎಂದು ಫೆ.17ರಂದು ನೀಡಲಾದ ಆದೇಶದಲ್ಲಿ ತಿಳಿಸಿದೆ.

ADVERTISEMENT

ಮುಖ್ಯ ಅರ್ಜಿ ವಜಾ ಮಾಡಿದ್ದ ಈ ಹಿಂದಿನ ಆದೇಶವನ್ನು ಹಿಂಪಡೆಯಲಾಗಿದೆ. ಹೀಗಾಗಿ, ಅರ್ಜಿಯನ್ನು ಮುಂದಿನ ಜುಲೈ 25ರಂದು ವಿಚಾರಣೆಗಾಗಿ ಪಟ್ಟಿಗೆ ಸೇರಿಸಬಹುದು ಎಂದು ಪೀಠವು ತಿಳಿಸಿತು.

ಕೃಷ್ಣನ ಜನ್ಮಸ್ಥಳವಾದ ಮಥುರಾದಲ್ಲಿ 13.37 ಎಕರೆ ವ್ಯಾಪ್ತಿಯಲ್ಲಿರುವ ಕಾತ್ರಾದಲ್ಲಿ ಕೇಶವ ದೇವ್‌ ದೇವಸ್ಥಾನದ ಆವರಣದಲ್ಲಿ 17ನೇ ಶತಮಾನದಲ್ಲಿ ಅತಿಕ್ರಮಿಸಿ ಮಸೀದಿ ನಿರ್ಮಿಸಲಾಗಿದೆ ಎಂದು ಕೆಲವರು ಕೋರ್ಟ್‌ನ ಮೆಟ್ಟಿಲೇರಿದ್ದರು.

ಬಾಲ ಭಕ್ತ ಭಗವಾನ್ ಶ್ರೀಕೃಷ್ಣ ವಿರಾಜ್‌ಮಾನ್‌ ಪರವಾಗಿ ಅವರ ‘ನಂತರದ ಸ್ನೇಹಿತ’ ರಂಜನಾ ಅಗ್ನಿಹೋತ್ರಿ ಮತ್ತು ಇತರೆ ಏಳು ಮಂದಿ ಈ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ನಿಭಾಯಿಸಲು ಆಗದವರ ಪರವಾಗಿ ಪ್ರತಿನಿಧಿಸುವವರನ್ನು ಕಾನೂನು ಪರಿಭಾಷೆಯಲ್ಲಿ ‘ನಂತರದ ಸ್ನೇಹಿತ’ ಎಂದು ಉಲ್ಲೇಖಿಸಲಾಗುತ್ತದೆ.

ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್‌ ವಕ್ಫ್‌ ಮಂಡಳಿ, ಶಾಹಿ ಮಸೀದಿ ಈದ್ಗಾ ಟ್ರಸ್ಟ್, ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್, ಶ್ರೀಕೃಷ್ಣ ಜನ್ಮಸ್ಥಳ ಸೇವಾ ಸಂಸ್ಥಾನ ಅವರನ್ನು ಪ್ರತಿವಾದಿಗಳಾಗಿ ಅರ್ಜಿಯಲ್ಲಿ ಹೆಸರಿಸಲಾಗಿದೆ. ಅತಿಕ್ರಮಣ ಮಾಡಿ ಕಟ್ಟಲಾಗಿರುವ ಮಸೀದಿಯನ್ನು ತೆರವುಗೊಳಿಸಲು ಮಸೀದಿಯ ವ್ಯವಸ್ಥಾಪನ ಸಮಿತಿಗೆ ಆದೇಶಿಸಬೇಕು ಎಂದು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.