ಲಖನೌ: ಹೆದ್ದಾರಿಗಳಲ್ಲಿ ಟ್ರಕ್ ಚಾಲಕರನ್ನು ಕೊಂದು ದರೋಡೆ ಮಾಡಿದ್ದ ಆರೋಪಿಯೊಬ್ಬ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿಯಾಣದ ರೋಹ್ಟಕ್ ನಿವಾಸಿ ಸಂದೀಪ್ ಎನ್‌ಕೌಂಟರ್‌ನಲ್ಲಿ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಹೆದ್ದಾರಿಯಲ್ಲಿ ಸರಕುಗಳನ್ನು ತುಂಬಿದ್ದ ಟ್ರಕ್‌ಗಳನ್ನು ತಡೆದು ಚಾಲಕರನ್ನು ಕೊಂದು ಲೂಟಿ ಮಾಡುತ್ತಿದ್ದ ಗುಂಪಿನ ಮೇಲೆ ನೋಯ್ಡಾದ ಎಸ್‌ಟಿಎಫ್ ಘಟಕ ಮತ್ತು ಬಾಗ್‌ಪತ್ ಪೊಲೀಸರು ಎನ್‌ಕೌಂಟರ್ ನಡೆಸಿತ್ತು. ಈ ವೇಳೆ ಗುಂಡೇಟಿನಿಂದ ಗಾಯಗೊಂಡಿದ್ದ ಸಂದೀಪ್‌ನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ’ ಎಂದು ಎಸ್‌ಟಿಎಫ್‌ನ ಎಡಿಜಿ ಅಮಿತಾಭ್ ಯಶ್ ತಿಳಿಸಿದ್ದಾರೆ.
ಕಾನ್ಪುರದಿಂದ ಸುಮಾರು ₹4 ಕೋಟಿ ಮೌಲ್ಯದ ನಿಕ್ಕಲ್ ಪ್ಲೇಟ್‌ಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಲೂಟಿ ಮಾಡಿದ್ದ ಪ್ರಕರಣದಲ್ಲಿ ಸಂದೀಪ್ ಪ್ರಮುಖ ಆರೋಪಿಯಾಗಿದ್ದ. ಈತನ ಬಗ್ಗೆ ಸುಳಿವು ನೀಡಿದವರಿಗೆ ₹1 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂದೀಪ್ ಮೇಲೆ ಐದು ಟ್ರಕ್ ಚಾಲಕರನ್ನು ಕೊಲೆ ಮಾಡಿ ಬಳಿಕ ಸರಕುಗಳು ಸೇರಿದಂತೆ ನಗದನ್ನು ದರೋಡೆ ಮಾಡಿದ ಆರೋಪವಿದೆ. ಜತೆಗೆ, ಆತನ ವಿರುದ್ಧ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ 16ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.