ADVERTISEMENT

ಹಿಜಾಬ್‌ ವಿವಾದ: ಮಂಡ್ಯದ ವಿದ್ಯಾರ್ಥಿನಿಗೆ ತಮಿಳುನಾಡಿನಲ್ಲಿ ಪ್ರಶಸ್ತಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 15:12 IST
Last Updated 9 ಫೆಬ್ರುವರಿ 2022, 15:12 IST
ಬೀಬಿ ಮುಸ್ಕಾನ್ ಖಾನ್
ಬೀಬಿ ಮುಸ್ಕಾನ್ ಖಾನ್   

ಚೆನ್ನೈ: ತನ್ನ ವಿರುದ್ಧ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳಿದ್ದ ಗುಂಪನ್ನು ಎದುರಿಸಿ, ಧೈರ್ಯ ಪ್ರದರ್ಶಿಸಿರುವ ಕರ್ನಾಟಕದ ಮಂಡ್ಯದ ವಿದ್ಯಾರ್ಥಿನಿ ಬೀಬಿ ಮುಸ್ಕಾನ್‌ ಖಾನ್‌ಗೆ ‘ಫಾತಿಮಾ ಶೇಖ್‌ ಪ್ರಶಸ್ತಿ’ ನೀಡುವುದಾಗಿ ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಳಗಂ (ಟಿಎಂಎಂಕೆ) ಬುಧವಾರ ಘೋಷಿಸಿದೆ.

‘ಒಬ್ಬ ಭಾರತೀಯ ಪ್ರಜೆಯಾಗಿ ಆಕೆ ತನ್ನ ಹಕ್ಕನ್ನು ಪ್ರತಿಪಾದನೆ ಮಾಡಿರುವುದನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ. ದೇಶದ ಮೊದಲ ಮುಸ್ಲಿಂ ಶಿಕ್ಷಕಿ ಎಂದೇ ಕರೆಯಲಾಗುವ ಫಾತಿಮಾ ಶೇಖ್‌ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಈ ಪ್ರಶಸ್ತಿಯನ್ನು ಮುಸ್ಕಾನ್‌ಖಾನ್‌ಗೆ ಪ್ರದಾನ ಮಾಡಲು ನಮಗೆ ಹೆಮ್ಮೆ ಎನಿಸುತ್ತದೆ’ ಎಂದು ಟಿಎಂಎಂಕೆ ಮುಖಂಡ ಎಂ.ಎಚ್‌.ಜವಾಹಿರುಲ್ಲಾ ತಿಳಿಸಿದ್ದಾರೆ.

‘ಸಂವಿಧಾನ ಆಕೆಗೆ ನೀಡಿರುವ ಹಕ್ಕನ್ನು ಕಸಿದುಕೊಳ್ಳಲು ಕೇಸರಿ ಪಡೆ ಯತ್ನಿಸಿತ್ತು. ಆಕೆ ಕಾಲೇಜು ಆವರಣ ಪ್ರವೇಶಿಸಿದಾಗ, ಕೆಲ ವಿದ್ಯಾರ್ಥಿಗಳಿದ್ದ ಗುಂಪು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದೆ. ಆಕೆ ಗುಂಪನ್ನು ನಿರ್ಭೀತಿಯಿಂದ ಎದುರಿಸಿದ್ದಲ್ಲದೇ, ಪ್ರತಿಯಾಗಿ ಅಲ್ಲಾ ಹು ಅಕ್ಬರ್‌ ಎಂಬುದಾಗಿ ಘೋಷಣೆ ಕೂಗಿದ್ದಾಳೆ ’ ಎಂದು ಅವರು ತಮ್ಮ ಟ್ವಿಟ್ಟರ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.