ADVERTISEMENT

ಭಾರಿ ಮಳೆಗೆ ಹಿಮಾಚಲ ಪ್ರದೇಶ ತತ್ತರ: ಸಚಿವರೊಂದಿಗೆ ಮೋದಿ ಮಾತುಕತೆ, ಪರಿಸ್ಥಿತಿ ಅವಲೋಕನ

ಪಿಟಿಐ
Published 11 ಜುಲೈ 2023, 13:54 IST
Last Updated 11 ಜುಲೈ 2023, 13:54 IST
ಹಿಮಾಚಲ ಪ್ರದೇಶದ ಕುಲ್ಲುವಿನಲ್ಲಿ ಬಿಯಾಸ್‌ ನದಿ ಉಕ್ಕಿ ಹರಿಯುತ್ತಿದೆ –ಪಿಟಿಐ ಚಿತ್ರ
ಹಿಮಾಚಲ ಪ್ರದೇಶದ ಕುಲ್ಲುವಿನಲ್ಲಿ ಬಿಯಾಸ್‌ ನದಿ ಉಕ್ಕಿ ಹರಿಯುತ್ತಿದೆ –ಪಿಟಿಐ ಚಿತ್ರ    

ನವದೆಹಲಿ: ಉತ್ತರ ಭಾರತದ ಹಲವೆಡೆ ಮಂಗಳವಾರವೂ ಮಳೆಯಾಗಿದೆ. ಹಲವು ನದಿಗಳು ತುಂಬಿ ಹರಿಯುತ್ತಿದ್ದು, ಭೂಕುಸಿತದಿಂದಾಗಿ ಅವಘಢಗಳು ಸಂಭವಿಸಿವೆ. ಹಿಮಾಚಲ ಪ್ರದೇಶ ಹೆಚ್ಚು ಬಾಧಿತವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಸಚಿವರೊಂದಿಗೆ ಮಾತನಾಡಿ, ಧಾರಾಕಾರ ಮಳೆ ಹಿನ್ನೆಲೆಯಲ್ಲಿ ದೆಹಲಿ ಹಾಗೂ ಇತರ ರಾಜ್ಯಗಳಲ್ಲಿ ಉದ್ಭವಿಸಿರುವ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಹೇಳಿದೆ.

ಮಳೆ ಬಾಧಿತ ರಾಜ್ಯಗಳಿಗೆ ಪಿಎಂ ಕೇರ್ಸ್‌ ಫಂಡ್‌ನಿಂದ ಪರಿಹಾರ ಬಿಡುಗಡೆ ಮಾಡುವಂತೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ADVERTISEMENT

ಹವಾಮಾನ ಇಲಾಖೆಯು ಹಿಮಾಚಲ ಪ್ರದೇಶದಲ್ಲಿ ಸೋಮವಾರ ‘ರೆಡ್‌ ಅಲರ್ಟ್‌’ ಘೋಷಿಸಿತ್ತು. ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಮಂಗಳವಾರ ಹಲವೆಡೆ ಭೂಕುಸಿತವಾಗಿದೆ. ಮನೆಗಳು ಸಹ ಕುಸಿದಿದ್ದು, ಜನರು ಪರದಾಡುತ್ತಿದ್ದಾರೆ.

ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖ್ಖು ಅವರೊಂದಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ಪರಿಹಾರ ಮತ್ತು ರಕ್ಷಣಾ ಕಾರ್ಯ ಕುರಿತು ಮಾಹಿತಿ ಪಡೆದರು ಎಂದು ಮೂಲಗಳು ಹೇಳಿವೆ.

ಪಂಜಾಬ್‌, ಹರಿಯಾಣದಲ್ಲಿ ಕೂಡ ಬೆಳಿಗ್ಗೆಯಿಂದಲೇ ಮಳೆ ಬೀಳುತ್ತಿತ್ತು. ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್ ಅವರು ಅಧಿಕಾರಿಗಳ ಸಭೆ ನಡೆಸಿ, ‍ಪರಿಸ್ಥಿತಿ ಅವಲೋಕಿಸಿದರು.

ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಭೇಡಘಾಟ್‌ ಸಮೀಪ ನರ್ಮದಾ ನದಿಯಲ್ಲಿ ನಡುಗಡ್ಡೆಯಲ್ಲಿ ನಾಲ್ವರು ಸಿಕ್ಕಿಹಾಕಿಕೊಂಡಿದ್ದರು. ಎನ್‌ಡಿಆರ್‌ಎಫ್‌ ಸಿಬ್ಬಂದಿ ಸತತ 13 ಗಂಟೆಗಳ ಕಾರ್ಯಾಚರಣೆ ನಡೆಸಿ ನಾಲ್ವರನ್ನು ರಕ್ಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಕಂಡುಬಂದ ದಿಢೀರ್‌ ಪ್ರವಾಹದಿಂದಾಗಿ ಜೋಶಿಮಠ–ಮಲಾರಿ ರಸ್ತೆ ಮೇಲೆ ನೀರು ನಿಂತು, ಸಂಚಾರಕ್ಕೆ ಅಡ್ಡಿಯಾಯಿತು. ದಿಢೀರ್‌ ಪ್ರವಾಹ ಉಂಟಾಗಲು ಕಾರಣಗಳ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಬೆಟ್ಟಗಳಲ್ಲಿ ಮಣ್ಣು–ಬಂಡೆಗಳು ಕುಸಿದು ನೀರಿನ ಹರಿವಿಗೆ ಕೆಲಕಾಲ ತಡೆಯುಂಟಾಗಿ, ನಂತರ ನೀರು ಧುಮುಕಿರುವುದು ದಿಢೀರ್‌ ಪ್ರವಾಹಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಮೇಲ್ಭಾಗದಲ್ಲಿರುವ ಜಲಾನಯನ ಪ್ರದೇಶದಲ್ಲಿ ಹಿಮಬಂಡೆಗಳು ಕರಗಿದ್ದರಿಂದ ಈ ದಿಢೀರ್‌ ಪ್ರವಾಹ ಉಂಟಾಗಿರಬಹುದು ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಈ ಪ್ರದೇಶದಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಲವಿದ್ಯುತ್ ಯೋಜನೆಗಳ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಯೋಜನೆಗಳಿಂದಾಗಿ ಭೂಕುಸಿತವಾಗಿ, ಪ್ರವಾಹದ ತೀವ್ರತೆ ಹೆಚ್ಚಬಹುದು ಎಂಬ ಆತಂಕವನ್ನು ಜನರು ವ್ಯಕ್ತಪಡಿಸಿದ್ದಾರೆ.

ಹಿಮಾಚಲ ಪ್ರದೇಶದ ಕುಲ್ಲುವಿನಲ್ಲಿ ಬಿಯಾಸ್‌ ನದಿ ಪ್ರವಾಹದಲ್ಲಿ ಕೊಚ್ಚಿ ಹೋದ ರಸ್ತೆಯಲ್ಲಿಯೇ ಜನರು ಓಡಾಡುತ್ತಿದ್ದುದು ಮಂಗಳವಾರ ಕಂಡುಬಂತು –ಪಿಟಿಐ ಚಿತ್ರ
ಹಿಮಾಚಲ ಪ್ರದೇಶದ ಮಂಡಿ ನಗರದಲ್ಲಿ ಮಳೆ ನೀರಿನಲ್ಲಿ ಕೊಚ್ಚಿ ಬಂದ ಅವಶೇಷಗಳಲ್ಲಿ ಮಂಗಳವಾರ ವಾಹನಗಳು ಸಿಲುಕಿದ್ದವು –ಪಿಟಿಐ ಚಿತ್ರ
ಶಿಮ್ಲಾ–ಚಂಡೀಗಢ ರಾಷ್ಟ್ರೀಯ ಹೆದ್ದಾರಿ ಹಾಳಾಗಿರುವುದು –ಪಿಟಿಐ ಚಿತ್ರ
ನವದೆಹಲಿಯ ವಸತಿ ಪ್ರದೇಶವೊಂದಕ್ಕೆ ಯಮುನಾ ನದಿ ನುಗ್ಗಿದ್ದು ಬಾಲಕನೊಬ್ಬ ನೀರಿನಲ್ಲಿ ಆಟವಾಡುತ್ತಿದ್ದುದು ಮಂಗಳವಾರ ಕಂಡುಬಂತು –ಎಎಫ್‌ಪಿ ಚಿತ್ರ

ಭೂಕುಸಿತ.. ಸಂಪರ್ಕ ಕಡಿತ.. ಪ್ರಾಣ ಹಾನಿ

* ನಿರಂತರ ಮಳೆಯಿಂದಾಗಿ ಶಿಮ್ಲಾದಲ್ಲಿ ನೀರು ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಿದೆ. ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ

* ಉತ್ತರಾಖಂಡದ ಉತ್ತರಕಾಶಿಯಲ್ಲಿ ಸೋಮವಾರ ರಾತ್ರಿ ಭೂಕುಸಿತವಾಗಿದ್ದು ಗಂಗೋತ್ರಿ ಹೆದ್ದಾರಿಯಲ್ಲಿನ ಗಂಗನಾನಿ ಸೇತುವೆ ಬಳಿ ಮೂರು ವಾಹನಗಳು ಹೂತುಹೋಗಿ ನಾಲ್ವರು ಯಾತ್ರಿಗಳು ಮೃತಪಟ್ಟಿದ್ದಾರೆ. ಮೃತರು ಮಧ್ಯಪ್ರದೇಶದವರು

* ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಜುಮ್ಮಾಗಡ ನದಿಗೆ ನಿರ್ಮಿಸಿದ್ದ ಸೇತುವೆ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಭಾರತ ಮತ್ತು ಟಿಬೆಟ್‌ ಸಂಪರ್ಕಿಸಿರುವ ರಸ್ತೆ ಸಂಪೂರ್ಣ ಹಾಳಾಗಿದ್ದು ಗಡಿಯಲ್ಲಿನ 12ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ

* ಹಿಮಾಚಲ ಪ್ರದೇಶ ಪ್ರವಾಸಿ ತಾಣ ಮನಾಲಿಯಲ್ಲಿ ಸಿಲುಕಿದ್ದ 22 ಪ್ರವಾಸಿಗರನ್ನು ರಕ್ಷಿಸಲಾಗಿದೆ. 

* ಪಂಜಾಬ್‌ನ ಪಟಿಯಾಲ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕೆ ಸೇನೆಯ ನೆರವು ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.