ಫೇಸ್‌ಬುಕ್
ಶಿಮ್ಲಾ: ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಮನೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಲೈವ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಬಾತು ಕಂಟೋನ್ಮೆಂಟ್ ವ್ಯಾಪ್ತಿಯ ಶಾದಿಯಾನ ಪಂಚಾಯತ್ ಅಡಿಯ ಒಲಗಿ ಎಂಬ ಹಳ್ಳಿಯಲ್ಲಿ ಬುಧವಾರ ಸಂಜೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಮಂದಿ ಮಾರುಕಟ್ಟೆಗೆ ತೆರಳಿದ್ದ ವೇಳೆ ಮಹಿಳೆ ಜೀವ ತೆಗೆದುಕೊಂಡಿದ್ದಾಳೆ.
ಘಟನೆ ಕುರಿತಂತೆ ಮಾಹಿತಿ ಬಂದ ಕೂಡಲೇ ಪೊಲೀಸ್ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಆತ್ಮಹತ್ಯೆಗೆ ಕಾರಣ ಕುರಿತು ತನಿಖೆ ನಡೆಯುತ್ತಿದೆ ಎಂದು ಎಸ್‌ಪಿ ಪರ್ವನೂ ಮೆಹರ್ ಪನ್ವರ್ ತಿಳಿಸಿದ್ದಾರೆ.
ನನ್ನ ಆತ್ಮಹತ್ಯೆಗೆ ಯಾರೂ ಕಾರಣರಲ್ಲ ಎಂದು ನೇಣು ಬಿಗಿದುಕೊಳ್ಳುವುದಕ್ಕೂ ಮುನ್ನ ಫೇಸ್‌ಬುಕ್ ಲೈವ್ ವಿಡಿಯೊದಲ್ಲಿ ಮಹಿಳೆ ತಿಳಿಸಿದ್ದಾರೆ.
ಆತ್ಮಹತ್ಯೆ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಲೈವ್ ಪ್ರಸಾರವಾದ ಬಳಿಕ ಈ ಪ್ರದೇಶದಾದ್ಯಂತ ಜನ ಬೆಚ್ಚಿ ಬಿದ್ದಿದ್ದಾರೆ.
ಆತ್ಮಹತ್ಯೆಯ ಲೈವ್ ವಿಡಿಯೊ ನೋಡಿದ ಸುಬಾತು ಮಾರುಕಟ್ಟೆಯ ವ್ಯಾಪಾರಿಗಳು, ಆಕೆಯ ತಾಯಿ ಮತ್ತು ಸಹೋದರನಿಗೆ ಮಾಹಿತಿ ನೀಡಿ ತಕ್ಷಣ ಮನೆಗೆ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆ ತಾಯಿಯ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಘಟನೆಯ ಬಗ್ಗೆ ಅವರಿಗೆ ಸಮಯಕ್ಕೆ ಸರಿಯಾಗಿ ಮಾಹಿತಿ ಸಿಗಲಿಲ್ಲ. ಆತ್ಮಹತ್ಯೆಯ ನಂತರವೂ ವಿಡಿಯೊ ಒಂದು ಗಂಟೆಯವರೆಗೆ ಫೇಸ್‌ಬುಕ್‌ನಲ್ಲಿತ್ತು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.