ADVERTISEMENT

ಅಸ್ಸಾಂ: ಹಿಮಂತ ಬಿಸ್ವ ಶರ್ಮಾ ನೂತನ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 9 ಮೇ 2021, 8:43 IST
Last Updated 9 ಮೇ 2021, 8:43 IST
ಹಿಮಂತ ಬಿಸ್ವ ಶರ್ಮಾ
ಹಿಮಂತ ಬಿಸ್ವ ಶರ್ಮಾ    

ಗುವಾಹಟಿ: ಹಿಮಂತ ಬಿಸ್ವ ಶರ್ಮಾ (52) ಅಸ್ಸಾಂನ ನೂತನ ಮುಖ್ಯಮಂತ್ರಿ ಆಗಲಿದ್ದಾರೆ. ಭಾನುವಾರ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

2015ರ ವರೆಗೂ ಕಾಂಗ್ರೆಸ್‌ನಲ್ಲಿದ್ದ ಶರ್ಮಾ, ಅನಂತರ ಬಿಜೆಪಿಗೆ ಸೇರ್ಪಡೆಯಾದರು. ಅವರೊಂದಿಗೆ ಕಾಂಗ್ರೆಸ್‌ನ ಹಲವು ಶಾಸಕರು ಸಹ ಬಿಜೆಪಿಗೆ ಪಕ್ಷಾಂತರಗೊಂಡರು.

ಬಿಜೆಪಿಯ ಅಸ್ಸಾಂ ಶಾಸಕಾಂಗ ಪಕ್ಷವು ನೂತನ ಮುಖ್ಯಮಂತ್ರಿ ಆಯ್ಕೆ ಮಾಡುವುದಕ್ಕೂ ಮುನ್ನ ರಾಜ ಭವನದಲ್ಲಿ ರಾಜ್ಯಪಾಲ ಜಗದೀಶ್‌ ಮುಖಿ ಅವರನ್ನು ಭೇಟಿಯಾದ ಸರ್ಬಾನಂದ ಸೊನೊವಾಲ್, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಶಾಸಕಾಂಗ ಪಕ್ಷದ ಸಭೆಯಲ್ಲಿ ಶರ್ಮಾ ಅವರನ್ನು ಸಿಎಂ ಸ್ಥಾನಕ್ಕೆ ಸೊನೊವಾಲ್‌ ಪ್ರಸ್ತಾಪಿಸಿದರು.

ADVERTISEMENT

ಸೋನೊವಾಲ್ ಅವರು ಅಸ್ಸಾಂನ ಸ್ಥಳೀಯ ಸೋನೊವಾಲ್-ಕಚಾರಿ ಬುಡಕಟ್ಟು ಜನಾಂಗಕ್ಕೆ ಸೇರಿದ್ದಾರೆ. ಅಸ್ಸಾಂ ಬ್ರಾಹ್ಮಣರಾದ ಹಿಮಂತ ಬಿಸ್ವ ಶರ್ಮಾ ಅವರು ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಂಚಾಲಕರಾಗಿದ್ದಾರೆ. ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಜೆಪಿ ಘೋಷಿಸಿರಲಿಲ್ಲ. 2016ರ ಚುನಾವಣೆಯಲ್ಲಿ ಸೋನೊವಾಲ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದ ಬಿಜೆಪಿ, ಅಧಿಕಾರಕ್ಕೆ ಬಂದಿತ್ತು.

ಕೇಂದ್ರ ಸಚಿವ ನರೇಂದ್ರ ಸಿಂಗ್‌ ತೋಮರ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಸೇರಿದಂತೆ ಹಲವು ಮುಖಂಡರು ಶಾಸಕಾಂಗ ಸಭೆಯಲ್ಲಿ ಭಾಗಿಯಾದರು.

126 ಸದಸ್ಯಬಲದ ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ 60 ಕ್ಷೇತ್ರಗಳಲ್ಲಿ ಹಾಗೂ ಮಿತ್ರಪಕ್ಷಗಳಾದ ಎಜಿಪಿ 9 ಕ್ಷೇತ್ರಗಳು ಸೇರಿ ಮೈತ್ರಿಕೂಟಕ್ಕೆ ಒಟ್ಟು 75 ಸ್ಥಾನಗಳಲ್ಲಿ ಗೆಲುವು ದಾಖಲಾಗಿದೆ. ಯುಪಿಪಿಎಲ್ 6 ಕ್ಷೇತ್ರಗಳಲ್ಲಿ ಜಯ ಸಾಧಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.