ಸುವೇಂದು ಅಧಿಕಾರಿ
ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಕಲಿ ಮತದಾರರನ್ನು ನಿರ್ಮೂಲನೆ ಮಾಡುವ ನೆಪದಲ್ಲಿ ಹಿಂದೂಗಳನ್ನು ಮತ್ತು ಹಿಂದಿ ಮಾತನಾಡುವ ಮತದಾರರನ್ನು ಮತದಾರರ ಪಟ್ಟಿಯಿಂದ ಟಿಎಂಸಿ ತೆಗೆದುಹಾಕುತ್ತಿದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಫೆಬ್ರುವರಿ 27ರಿಂದ ಅನೇಕ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಮತದಾರರ ಪಟ್ಟಿಯಿಂದ ಹಿಂದೂ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ. ಈ ಸಂಬಂಧ ಕೃಷ್ಣನಗರದ ಬಿಡಿಒ ಅವರನ್ನು ವಜಾಗೊಳಿಸುವಂತೆ ನಾನು ಚುನಾವಣಾ ಆಯೋಗವನ್ನು ಒತ್ತಾಯಿಸುತ್ತೇನೆ’ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರಿ ಅಧಿಕಾರಿಗಳು ಟಿಎಂಸಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದು, ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಹಿಂದೂ ಮತದಾರರನ್ನು ಬಾಂಗ್ಲಾದೇಶಿ ಪ್ರಜೆಗಳಲ್ಲ ಎಂದು ಸಾಬೀತುಪಡಿಸುವಂತೆ ಕೇಳಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಆರೋಪಗಳಿಗೆ ಪ್ರತಿಕ್ರಿಯಿಸಿರುವ ಟಿಎಂಸಿ ನಾಯಕ ಜೈಪ್ರಕಾಶ್ ಮಜುಂದಾರ್, ‘ವಾಸ್ತವವೆಂದರೆ, ಹರಿಯಾಣ ಮತ್ತು ಇತರ ರಾಜ್ಯಗಳ ಮತದಾರರನ್ನು ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗೆ ಸೇರಿಸುವ ಪ್ರಕ್ರಿಯೆಯಲ್ಲಿ ಬಿಜೆಪಿ ತೊಡಗಿದೆ. ಈಗ ಮತದಾರರ ಪಟ್ಟಿ ಹಗರಣ ಬಹಿರಂಗಗೊಂಡಿರುವುದರಿಂದ , ಜನರ ಗಮನವನ್ನು ಬೇರೆಡೆ ಸೆಳೆಯಲು ಅವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಇವೆಲ್ಲವು ಆಧಾರರಹಿತವಾಗಿವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.