ಮೋಹನ್ ಭಾಗವತ್
–ಪಿಟಿಐ ಚಿತ್ರ
ನಾಗ್ಪುರ: ಹಿಂದೂ ಸಮಾಜದ ಶಕ್ತಿ ಮತ್ತು ಸ್ವಭಾವವು ಏಕತೆಯನ್ನು ಖಾತರಿಪಡಿಸುತ್ತದಯೇ ಹೊರತು ‘ನಾವು ಮತ್ತು ಅವರು’ ಎಂಬ ಪರಿಕಲ್ಪನೆ ಎಂದಿಗೂ ಅಸ್ತಿತ್ವದಲ್ಲಿಲ್ಲ ಎಂಬುದನ್ನು ಒತ್ತಿಹೇಳುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಾರ್ಷಿಕ ವಿಜಯದಶಮಿ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ನಾವು ಸ್ವದೇಶಿ ವಸ್ತುಗಳನ್ನು ಖರೀದಿಸುವ ಮೂಲಕ ಸ್ವಾವಲಂಬನೆಯನ್ನು ಸಾಧಿಸಬೇಕು. ಪಹಲ್ಗಾಮ್ ಉಗ್ರರ ದಾಳಿಯ ನಂತರ ಇತರ ರಾಷ್ಟ್ರಗಳ ನಿಲುವುಗಳು ಭಾರತದೊಂದಿಗಿನ ಅವರ ಸ್ನೇಹದ ಸ್ವರೂಪ ಮತ್ತು ವ್ಯಾಪ್ತಿಯನ್ನು ತೋರಿಸುತ್ತವೆ’ ಎಂದು ಅವರು ತಿಳಿಸಿದ್ದಾರೆ.
‘ಶ್ರೀಲಂಕಾ, ಬಾಂಗ್ಲಾದೇಶದಲ್ಲಿನ ಅಶಾಂತಿ ಮತ್ತು ನೇಪಾಳದಲ್ಲಿ ‘ಜೆನ್–ಝಿ’ ಪ್ರತಿಭಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ‘ಕ್ರಾಂತಿಕಾರಕ ಎಂದು ಕರೆಯಲ್ಪಡುವವರು ತಮ್ಮ ಉದ್ದೇಶಗಳನ್ನು ಸಾಧಿಸುವುದಿಲ್ಲ’ ಎಂದು ಹೇಳಿದ್ದಾರೆ.
‘ಹಿಂದೂ ಸಮಾಜವು ಜವಾಬ್ದಾರಿಯುತ ಸಮಾಜವಾಗಿದೆ. ‘ನಾವು ಮತ್ತು ಅವರು' ಎಂಬ ಕಲ್ಪನೆ ಇಲ್ಲಿ ಎಂದಿಗೂ ಅಸ್ತಿತ್ವದಲ್ಲಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ರೀತಿಯಲ್ಲಿ ವಿಶಿಷ್ಟವಾಗಿರುತ್ತಾನೆ. ಆಕ್ರಮಣಕಾರರು ಬಂದರು ಮತ್ತು ಹೋದರು. ಆದರೆ, ಜೀವನ ವಿಧಾನವು ಅಸ್ತಿತ್ವದಲ್ಲಿತ್ತು. ನಮ್ಮ ಅಂತರ್ಗತ ಸಾಂಸ್ಕೃತಿಕ ಏಕತೆಯೇ ನಮ್ಮ ಶಕ್ತಿ’ ಎಂದು ಅವರು ನುಡಿದಿದ್ದಾರೆ.
‘ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧೀಜಿಯವರ ಕೊಡುಗೆ ಅಪ್ರತಿಮ. ಆದರೆ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನವು ದೇಶ ಭಕ್ತಿ ಮತ್ತು ಬದ್ಧತೆಯನ್ನು ನಿರೂಪಿಸುತ್ತದೆ. ನಾವು ಇದನ್ನು ಅನುಕರಿಸಬೇಕು’ ಎಂದು ಭಾಗವತ್ ಹೇಳಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭವು ನಂಬಿಕೆ ಮತ್ತು ಏಕತೆಯ ಸಂಕೇತವಾಗಿದೆ. ಆದರೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಧರ್ಮದ ಹೆಸರಿನಲ್ಲಿ ದಾಳಿ ನಡೆಸಿ 26 ಮಂದಿ ಭಾರತೀಯರನ್ನು ಹತ್ಯೆ ಮಾಡಿದ್ದರು. ಈ ಘಟನೆ ದೇಶದ ಜನರಿಗೆ ನೋವುಂಟು ಮಾಡಿತ್ತು. ಕೇಂದ್ರ ಸರ್ಕಾರ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸುವ ಮೂಲಕ ಉಗ್ರರಿಗೆ ತಕ್ಕ ಉತ್ತರ ನೀಡಿತು ಎಂದು ಅವರು ಉಲ್ಲೇಖಿಸಿದ್ದಾರೆ.
‘ಒಂದು ದೇಶಕ್ಕೆ ಸ್ನೇಹಿತರ ಅಗತ್ಯವಿದೆ. ಆದರೆ, ದೇಶದ ಭದ್ರತೆಯ ವಿಷಯಕ್ಕೆ ಬಂದಾಗ ಸುತ್ತಮುತ್ತಲಿನ ದೇಶಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಪಹಲ್ಗಾಮ್ ದಾಳಿಯ ನಂತರ ವಿವಿಧ ದೇಶಗಳು ತೆಗೆದುಕೊಂಡ ನಿಲುವುಗಳು ಯಾರು ನಮ್ಮ ಸ್ನೇಹಿತರು ಮತ್ತು ಎಷ್ಟರ ಮಟ್ಟಿಗೆ ಎಂಬುದನ್ನು ಬಹಿರಂಗಪಡಿಸಿವೆ’ ಎಂದು ಭಾಗವತ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.