
ಪವನ್ ಕಲ್ಯಾಣ್
ಅಮರಾವತಿ: ಹಿಂದೂಗಳನ್ನು ಪ್ರತಿಯೊಬ್ಬರೂ ಟಾರ್ಗೆಟ್ ಮಾಡುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಹಿಂದೂಗಳ ಸಂಪ್ರದಾಯವನ್ನು ಪ್ರಶ್ನಿಸಲಾಗುತ್ತಿದೆ ಎಂದು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಆರೋಪಿಸಿದ್ದಾರೆ.
ಸಂಪ್ರದಾಯಗಳ ಮೇಲೆ ದಾಳಿ ನಡೆದಾಗ ಅದನ್ನು ವಿರೋಧಿಸುವುದು ಪ್ರತಿಯೊಬ್ಬ ಹಿಂದೂವಿನ ಜವಾಬ್ದಾರಿ ಎಂದಿದ್ದಾರೆ.
ಮಧುರೈ ಬಳಿಯ ತಿರುಪರನ್‌ಕುಂಡ್ರಂ ಬೆಟ್ಟದ ಕಲ್ಲಿನ ದೀಪಸ್ತಂಭ ‘ದೀಪಥೋನ್’ನಲ್ಲಿ ಕಾರ್ತಿಕ ದೀಪ ಬೆಳಗಿಸಲು ಹೈಕೋರ್ಟ್‌ನ ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್ ಅವರು ಭಕ್ತರಿಗೆ ಅವಕಾಶ ನೀಡಿದ್ದು, ಅವರ ವಾಗ್ದಂಡನೆಗೆ 100 ಸಂಸದರು ಸಹಿ ಹಾಕಿ ಲೋಕಸಭೆಗೆ ನೀಡಿರುವ ನೋಟಿಸ್ ಕುರಿತಂತೆ ಪವನ್ ಕಲ್ಯಾಣ್ ಪ್ರಸ್ತಾಪಿಸಿದ್ದಾರೆ. ಅದೇ ಬೆಟ್ಟದಲ್ಲಿ ಸಿಕಂದರ್ ಬಾದುಶಾ ದರ್ಗಾ ಇದ್ದು, ಈ ಆದೇಶದಿಂದ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗಲಿದೆ ಎಂದು ಡಿಎಂಕೆ ಆತಂಕ ವ್ಯಕ್ತಪಡಿಸಿತ್ತು.
ಸಂವಿಧಾನವು ಎಲ್ಲ ಧರ್ಮಗಳಿಗೂ ಸಮಾನ ಹಕ್ಕುಗಳನ್ನು ನೀಡಿದೆ. ನ್ಯಾಯ ಎಲ್ಲರಿಗೂ ಒಂದೇ. ಧರ್ಮದ ಹಿತಾಸಕ್ತಿಗಳನ್ನು ರಕ್ಷಿಸಲು ರಚಿಸಲಾದ ನಿಯಮಗಳು ಇಸ್ಲಾಂ ಮತ್ತು ಕ್ರೈಸ್ತ ಧರ್ಮದಂತೆ ಹಿಂದೂ ಧರ್ಮಕ್ಕೂ ಅನ್ವಯಿಸುತ್ತವೆ ಎಂದಿದ್ದಾರೆ.
ತಮಿಳುನಾಡಿನ ಕೆಲವು ರಾಜಕೀಯ ಪಕ್ಷಗಳು ಹುಸಿ ಜಾತ್ಯತೀತತೆಯನ್ನು ಅನುಸರಿಸುತ್ತಿವೆ ಎಂದು ಆರೋಪಿಸಿದ ಅವರು, ಡಿಎಂಕೆ ಸರ್ಕಾರವು ದೇವಾಲಯಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಎಲ್ಲರೂ ಹಿಂದೂಗಳನ್ನು ಗುರಿಯಾಗಿಸಿಕೊಂಡು ಸಾಧ್ಯವಿರುವ ಎಲ್ಲ ಅವಕಾಶಗಳಲ್ಲಿ ಅವರ ಸಂಪ್ರದಾಯಗಳನ್ನು ಪ್ರಶ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆದ್ದರಿಂದ, ತಮಿಳುನಾಡು, ಅಸ್ಸಾಂ ಅಥವಾ ಪಶ್ಚಿಮ ಬಂಗಾಳದ ಎಲ್ಲೇ ಹಿಂದೂ ಆಚರಣೆಗಳ ಮೇಲೆ ದಾಳಿ ನಡೆದಾಗ ಅದನ್ನು ವಿರೋಧಿಸುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ ಎಂದು ಕಲ್ಯಾಣ್ ಹೇಳಿದ್ದಾರೆ.
‘ದೇವರನ್ನು ಪ್ರಾರ್ಥಿಸಲು ಕೈಜೋಡಿಸಿ ದೇವಸ್ಥಾನಕ್ಕೆ ಹೋಗುವ, ಸನಾತನ ಧರ್ಮದಲ್ಲಿ ನಂಬಿಕೆ ಇಟ್ಟಿರುವ ಪ್ರತಿಯೊಬ್ಬರೂ ಅವಕಾಶವಾದಿ ರಾಜಕಾರಣಿಗಳ ಒಲವುಗಳ ಬಗ್ಗೆ ಮಾತನಾಡಬೇಕು’ ಎಂದು ಜನಸೇನಾ ಸಂಸ್ಥಾಪಕ ಬುಧವಾರ ರಾತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.