ಪಟ್ನಾ: ಬಿಹಾರದ ರಾಜಧಾನಿ ಪಟ್ನಾದಲ್ಲಿರುವ ಐತಿಹಾಸಿಕ ಸುಲ್ತಾನ್ ಅರಮನೆಯನ್ನು ಧ್ವಂಸಗೊಳಿಸುವ ಸರ್ಕಾರದ ಪ್ರಸ್ತಾವನೆಗೆ ಹಲವು ಇತಿಹಾಸಕಾರರು, ಸಂಶೋಧಕರು, ಜನ ಸಾಮಾನ್ಯರು ವಿರೋಧ ವ್ಯಕ್ತಪಡಿಸಿದ್ದು, ಇದನ್ನು ನೆಲಸಮಗೊಳಿಸುವ ಬದಲು ಸಂರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೀರ್ ಚಂದಾ ಪಟೇಲ್ ರಸ್ತೆಯಲ್ಲಿರುವ 100 ವರ್ಷ ಹಳೆಯ ಸುಲ್ತಾನ್ ಅರಮನೆ ಜಾಗವೂ ಸೇರಿದಂತೆ ಪಟ್ನಾದಲ್ಲಿ ಮೂರು ಪಂಚತಾರಾ ಹೋಟೆಲ್‌ಗಳ ನಿರ್ಮಾಣ ಮಾಡುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರ ಇತ್ತೀಚೆಗೆ ಘೋಷಣೆ ಮಾಡಿತ್ತು. ಇದಕ್ಕೆ ಭಾರಿ ಪ್ರತಿರೋಧ ವ್ಯಕ್ತವಾಗಿದೆ.
ಯಾರದು ಸುಲ್ತಾನ್?
ಪಟ್ನಾ ಮೂಲದ ಖ್ಯಾತ ಬ್ಯಾರಿಸ್ಟರ್ ಆಗಿದ್ದ ಸರ್ ಸುಲ್ತಾನ್ ಅಹ್ಮದ್ ಅವರು 1922ರಲ್ಲಿ ಈ ಅರಮನೆಯನ್ನು ನಿರ್ಮಾಣ ಮಾಡಿದ್ದರು. ಅಲ್ಲದೆ, ಅವರು ಪಟ್ನಾ ಹೈಕೋರ್ಟ್ ನ್ಯಾಯಮೂರ್ತಿಯಾಗಿಯೂ ಸೇವೆ ಸಲ್ಲಿಸಿದ್ದರು. ಜೊತೆಗೆ, ಅವರು 1923-30ರವರೆಗೆ ಪಟ್ನಾವಿಶ್ವ ವಿದ್ಯಾಲಯದ ಮೊದಲ ಕುಲಪತಿಯಾಗಿದ್ದರು.
ಆ ಬಳಿಕ ಅವರು ವೈಸ್‌ರಾಯ್ ಅವರ ಕಾನೂನು, ವಾರ್ತಾ ಮತ್ತು ಪ್ರಸಾರ ಖಾತೆಯ ಕಾರ್ಯಕಾರಿ ಕೌನ್ಸಿಲ್ ಸದಸ್ಯರಾದರು. 1930ರಲ್ಲಿ ಲಂಡನ್‌ನಲ್ಲಿ ನಡೆದ ಐತಿಹಾಸಿಕ ದುಂಡು ಮೇಜಿನ ಸಭೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಜೊತೆ ಭಾರತದ ನಿಯೋಗವನ್ನು ಪ್ರತಿನಿಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.