
ಸಾವು (ಪ್ರಾತಿನಿಧಿಕ ಚಿತ್ರ)
ಸರನ್(ಬಿಹಾರ): ಬಿಹಾರದ ಸರನ್ ಜಿಲ್ಲೆಯಲ್ಲಿ ಚಳಿ ಹಿನ್ನೆಲೆ ಮೈ ಕಾಸಲು ಹಚ್ಚಲಾಗಿದ್ದ ಬೆಂಕಿ ಕುಟುಂಬ ಸದಸ್ಯರ ಪ್ರಾಣ ತೆಗೆದಿದೆ.
ಶಾಖಕ್ಕಾಗಿ ಮನೆಯ ಕೊಠಡಿಯೊಂದರ ಮೂಲೆಯೊಂದರಲ್ಲಿ ಬೆಂಕಿ ಹಾಕಿ ಬಾಗಿಲು ಮುಚ್ಚಿ ಮಲಗಿದ್ದರು. ಈ ಸಂದರ್ಭ ಕೊಠಡಿ ತುಂಬಾ ಹೊಗೆ ಆವರಿಸಿ ಮೂವರು ಮಕ್ಕಳು ಸೇರಿದಂತೆ ಕುಟುಂಬದ ನಾಲ್ವರು ಸದಸ್ಯರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಭಗವಾನ್ ಬಜಾರ್ ಪ್ರದೇಶದ ಮನೆಯಲ್ಲಿ ಈ ಘಟನೆ ನಡೆದಿದ್ದು, ಕುಟುಂಬದ ಇನ್ನಿಬ್ಬರು ಸದಸ್ಯರು ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೃತರು ಉತ್ತರ ಪ್ರದೇಶದ ಸರ್ಕಾರಿ ಅಧಿಕಾರಿಯೊಬ್ಬರ ಕುಟುಂಬ ಸದಸ್ಯರಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
‘ಮನೆಯ ಕೊಠಡಿಯ ಬಾಗಿಲು ಮುಚ್ಚಿದ್ದರಿಂದ ಆಮ್ಲಜನಕದ ಕೊರತೆಯುಂಟಾಗಿ ಅವರು ಮೃತಪಟ್ಟಿದ್ದಾರೆ. ಮೂವರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರು ಪ್ರಜ್ಞೆ ಕಳೆದುಕೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತನಿಖೆ ಆರಂಭವಾಗಿದೆ’ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಆಶಿಶ್ ತಿಳಿಸಿದ್ದಾರೆ.
ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ತನಿಖೆಯಲ್ಲಿ ಸಹಕರಿಸುತ್ತಿದೆ. ಎಲ್ಲ ಕೋನಗಳಿಂದ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.