ADVERTISEMENT

ಕೊರೊನಾ ವಿರುದ್ಧ ವೈದ್ಯರ ಹೋರಾಟಕ್ಕೆ ಶ್ಲಾಘನೆ; ಭದ್ರತೆ ಭರವಸೆ ನೀಡಿದ ಗೃಹ ಸಚಿವ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 8:59 IST
Last Updated 22 ಏಪ್ರಿಲ್ 2020, 8:59 IST
ಗೃಹ ಸಚಿವ ಅಮಿತ್ ಶಾ
ಗೃಹ ಸಚಿವ ಅಮಿತ್ ಶಾ   

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಹರ್ಷವರ್ಧನ್ ಅವರೊಂದಿಗೆ ಬುಧವಾರ ವೈದ್ಯರ ತಂಡ ಮತ್ತು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು ಮತ್ತು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ವೈದ್ಯರ ಕಾರ್ಯವನ್ನು ಶ್ಲಾಘಿಸಿದ ಅವರು, ಅವರಿಗೆ ಸೂಕ್ತ ರೀತಿಯ ಭದ್ರತೆ ನೀಡುವ ಭರವಸೆ ನೀಡಿದರು.

ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಮತ್ತು ದೇಶದ ವಿವಿಧ ಭಾಗಗಳಲ್ಲಿ ಕೋವಿಡ್-19 ಕರ್ತವ್ಯದಲ್ಲಿ ತೊಡಗಿರುವ ಕೆಲವು ವೈದ್ಯರ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳು ವರದಿಯಾದ ಬಳಿಕ ವಿಡಿಯೊ ಕಾನ್ಫರೆನ್ಸ್ ಮೂಲಕ ವೈದ್ಯರು ಮತ್ತು ಐಎಂಎ ಪ್ರತಿನಿಧಿಗಳೊಂದಿಗೆ ಇಂದು ಸಭೆ ನಡೆಸಿದರು. ಈ ವೇಳೆ ವೈದ್ಯರ ಉತ್ತಮ ಕಾರ್ಯವನ್ನು ಶ್ಲಾಘಿಸಿ, ಸಂಪೂರ್ಣ ಭದ್ರತೆ ನೀಡುವ ಭರವಸೆಯನ್ನು ನೀಡಿದ್ದಾರೆ.

ವೈದ್ಯರು ಸಾಂಕೇತಿಕ ಪ್ರತಿಭಟನೆಯನ್ನು ಕೂಡ ಮಾಡಬಾರದು. ಸರ್ಕಾರವು ವೈದ್ಯರೊಂದಿಗೆ ಇದೆ ಎಂದು ಮನವಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ಕುರಿತು ಟ್ವೀಟ್ ಮಾಡಿರುವ ಅಮಿತ್ ಶಾ, 'ಆರೋಗ್ಯ ಸಚಿವರು ಮತ್ತು ನಾನು ವೈದ್ಯರು ಮತ್ತು ಐಎಂಎ ಪ್ರತನಿಧಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದೇವೆ. ಸಂಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ವೈದ್ಯರು ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿರುವ ವಿಧಾನ ಅಸಾಧಾರಣವಾಗಿದೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬ ಭಾರತೀಯರು ವೈದ್ಯರೊಂದಿಗೆ ಸಹಕರಿಸಬೇಕೆಂದು ನಾನು ಒತ್ತಾಯಿಸುತ್ತೇನೆ' ಎಂದಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ನಮ್ಮ ವೈದ್ಯರ ಕೆಲಸದ ಸ್ಥಳದಲ್ಲಿ ಅವರ ಸುರಕ್ಷತೆ ಮತ್ತು ಘನತೆ ಕಾಪಾಡುವಲ್ಲಿ ಯಾವುದೇ ರಾಜಿ ಇಲ್ಲ. ಎಲ್ಲಾ ಸಮಯದಲ್ಲೂ ಅವರಿಗೆ ಅನುಕೂಲಕರ ವಾತಾವರಣವನ್ನು ಖಾತ್ರಿಪಡಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಮೋದಿ ಸರ್ಕಾರವು ವೈದ್ಯರ ರಕ್ಷಣೆಗೆ ಬದ್ಧವಾಗಿದೆ ಎಂದು ನಾನು ವೈದ್ಯರಿಗೆ ಭರವಸೆ ನೀಡಿದ್ದೇನೆ ಮತ್ತು ಅವರ ಉದ್ದೇಶಿತ ಪ್ರತಿಭಟನೆಯನ್ನು ಮರುಪರಿಶೀಲಿಸುವಂತೆ ಮನವಿ ಮಾಡುತ್ತೇನೆ ಎಂದಿದ್ದರು.

ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಮೇಲೆ ನಡೆಯುತ್ತಿರುವ ದಾಳಿ ಹಾಗೂ ಹಲ್ಲೆ ಖಂಡಿಸಿ ಐಎಂಎ ಪ್ರತಿಭಟನೆ ನಡೆಸಲು ಮುಂದಾಗಿತ್ತು. ಅಮಿತ್ ಶಾ ಭರವಸೆ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.