ADVERTISEMENT

ಅಮಿತ್ ಶಾ ಬಳಸುತ್ತಿರುವ ಮಫ್ಲರ್ ಬೆಲೆ ₹80 ಸಾವಿರ: ಅಶೋಕ್ ಗೆಹಲೋತ್

ಪಿಟಿಐ
Published 12 ಸೆಪ್ಟೆಂಬರ್ 2022, 10:14 IST
Last Updated 12 ಸೆಪ್ಟೆಂಬರ್ 2022, 10:14 IST
ಅಶೋಕ್ ಗೆಹಲೋತ್
ಅಶೋಕ್ ಗೆಹಲೋತ್   

ಜೈಪುರ: ‘ಭಾರತವನ್ನು ಒಗ್ಗೂಡಿಸಿ ಯಾತ್ರೆ’ಯಲ್ಲಿ ರಾಹುಲ್ ಗಾಂಧಿ ₹ 41 ಸಾವಿರ ಬೆಲೆಯ ಟೀ ಶರ್ಟ್ ಧರಿಸಿದ್ಧರು ಎಂದು ಟೀಕಿಸಿದ್ದ ಬಿಜೆಪಿಗೆ ಕಾಂಗ್ರೆಸ್, ಅಮಿತ್ ಶಾ ಅವರ ದುಬಾರಿ ಬೆಲೆಯ ಮಫ್ಲರ್ ಉಲ್ಲೇಖಿಸಿ ತಿರುಗೇಟು ನೀಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಸಾ ಅವರು ಬಳಸುತ್ತಿರುವ ಮಫ್ಲರ್ ಬೆಲೆ ₹80 ಸಾವಿರ ರೂಪಾಯಿಯಾಗಿದ್ದು, ಕೇಸರಿ ಪಕ್ಷದ ಇತರೆ ನಾಯಕರು ₹ 2.5 ಲಕ್ಷ ಬೆಲೆಯ ಸನ್ ಗ್ಲಾಸ್‌ಗಳನ್ನು ಧರಿಸುತ್ತಾರೆ ಎಂದು ರಾಜಸ್ಥಾನದ ಅಶೋಕ್ ಗೆಹಲೋತ್ ಹೇಳಿದ್ದಾರೆ.

‘ಭಾರತ ಒಗ್ಗೂಡಿಸಿ ಯಾತ್ರೆ’ಯಲ್ಲಿ ಕಾಂಗ್ರೆಸ್‌ಗೆ ಸಿಗುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆಯಿಂದ ಬಿಜೆಪಿ ಚಿಂತೆಗೊಳಗಾಗಿದೆ ಎಂದು ಅವರು ಟೀಕಿಸಿದ್ದಾರೆ.

‘ಭಾರತ ಒಗ್ಗೂಡಿಸಿ ಯಾತ್ರೆಯಿಂದ ಅವರಿಗೇನು ಸಮಸ್ಯೆ? ಬಿಜೆಪಿ ನಾಯಕರು ₹ 2.5 ಲಕ್ಷ ಬೆಲೆಯ ಕೂಲಿಂಗ್ ಗ್ಲಾಸ್ ಧರಿಸುತ್ತಾರೆ ಮತ್ತು ಅಮಿತ್ ಶಾ ₹80 ಸಾವಿರ ಬೆಲೆಯ ಮಫ್ಲರ್ ಬಳಸುತ್ತಿರುವಾಗ ರಾಹುಲ್ ಗಾಂಧಿ ಟೀ ಶರ್ಟ್ ಬಗ್ಗೆ ಅವರು ಮಾತನಾಡುತ್ತಿದ್ದಾರೆ’ಎಂದು ಚುರುವಿನಲ್ಲಿ ಸುದ್ದಿಗಾರರಿಗೆ ಗೆಹಲೋತ್ ಹೇಳಿದರು.

ADVERTISEMENT

‘ಅವರು(ಬಿಜೆಪಿ ನಾಯಕರು) ಟೀ ಶರ್ಟ್ ಮೇಲೆ ರಾಜಕಾರಣ ಮಾಡುತ್ತಿದ್ದಾರೆ’ಎಂದು ಟೀಕಿಸಿದರು.

ನಮ್ಮ ಯಾತ್ರೆಗೆ ಜನರ ಪ್ರತಿಕ್ರಿಯೆ ಅತ್ಯುತ್ತಮವಾಗಿದೆ. ಇದನ್ನು ಕಂಡು ಬಿಜೆಪಿಗರು ವಿಚಲಿತರಾಗಿದ್ದಾರೆ ಎಂದು ಗೆಹಲೋತ್ ವ್ಯಂಗ್ಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.