ಉಮಾ, ಸೋನಮ್, ರಾಜಾ
ಬೆಂಗಳೂರು: ‘ಮೇಘಾಲಯ ಹನಿಮೂನ್ ಹತ್ಯೆ’ ಪ್ರಕರಣ ದೊಡ್ಡ ತಿರುವು ಪಡೆದುಕೊಂಡಿದ್ದು, ಪತ್ನಿಯೇ ಪತಿಯ ಕೊಲೆಗೆ ಸುಪಾರಿ ನೀಡಿರುವುದಾದಾಗಿ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಮಧ್ಯಪ್ರದೇಶದ ಇಂಧೋರ್‌ನ ರಾಜ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಹೆಂಡತಿ ಹಾಗೂ ಇತರ ಐವರು ಆರೋಪಿಗಳನ್ನು ಇಂದು ಮೇಘಾಲಯ ಪೊಲೀಸರು ಉತ್ತರಪ್ರದೇಶದಲ್ಲಿ ಬಂಧಿಸಿದ್ದಾರೆ.
ಏತನ್ಮಧ್ಯೆ ಕಣ್ಣೀರಿಡುತ್ತಿರುವ ಹತ್ಯೆಯಾದ ರಾಜ ರಘುವಂಶಿ ಅವರ ತಾಯಿ ಉಮಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ‘ಸೋನಮ್ ನನ್ನ ಮಗನನ್ನು ಪ್ರೀತಿಸಿದ್ದರೆ ಆತನನ್ನು ಸಾಯಲು ಬಿಡುತ್ತದ್ದಳೇ ಎಂದು ಪ್ರಶ್ನಿಸಿದ್ದಾರೆ. ಆಕೆ ಹೇಗೆ ಒಂದು ಗಾಯವಿಲ್ಲದೇ ಬದುಕುಳಿದಿದ್ದಾಳೆ? ನನ್ನ ಮಗನನ್ನು ಕೊಂದಿರುವವರಿಗೆ ಅತ್ಯಂತ ಕಠಿಣ ಶಿಕ್ಷೆ ಆಗಬೇಕು’ ಎಂದು ಸುದ್ದಿಸಂಸ್ಥೆ ಎಎನ್‌ಐಗೆ ಪ್ರತಿಕ್ರಿಯೆ ನೀಡಿದ್ದಾರೆ.
‘ಸೋನಮ್‌ಳೇ ನನ್ನ ಮಗನನ್ನು ಪುಸಲಾಯಿಸಿ ಮೇಘಾಲಯಕ್ಕೆ ಹನಿಮೂನ್‌ಗೆ ಕರೆದುಕೊಂಡು ಹೋಗಿದ್ದಳು. ವಾಪಸ್ ಬರುವ ಟಿಕೆಟ್‌ಗಳನ್ನೂ ಬುಕ್ ಮಾಡಿರಲಿಲ್ಲ. ಈಗ ಸೋನಮ್ ಜೊತೆ ಬಂಧಿತರಾಗಿರುವ ಆರೋಪಿಗಳು ಯಾರು ಎಂಬುದು ನಮಗೆ ಗೊತ್ತಿಲ್ಲ’ ಎಂದು ಹೇಳಿದ್ದಾರೆ.
ಮೇ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರಾಜ ರಘುವಂಶಿ ಮತ್ತು ಸೋನಮ್, ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಮೇ 23ರಂದು ದಂಪತಿ ಕಾಣೆಯಾಗಿದ್ದು, ಜೂನ್ 2ರಂದು ರಘುವಂಶಿ ಅವರ ಶವ ಮೇಘಾಲಯದ ಜಲಪಾತವೊಂದರ ಕಮರಿಯಲ್ಲಿ ಸಿಕ್ಕಿತ್ತು.
ನಾಪತ್ತೆಯಾದ ಸೋನಮ್‌ಗಾಗಿ ಹುಡುಕಾಟ ನಡೆಸುತ್ತಿರುವಾಗಲೇ, ಉತ್ತರ ಪ್ರದೇಶ ಗಾಜಿಪುರದ ಪೊಲೀಸರ ಮುಂದೆ ಸೋಮವಾರ ಸೋನಮ್ ಶರಣಾಗಿದ್ದರು. ಏತನ್ಮಧ್ಯೆ, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ ಪೊಲೀಸರು ತನಿಖೆ ನಡೆಸಿದ್ದರು.
ತನಿಖೆ ವೇಳೆ ಆರೋಪಿಗಳು ರಾಜ ರಘುವಂಶಿ ಅವರ ಕೊಲೆಗೆ ಸೋನಮ್ ಅವರೇ ಸುಪಾರಿ ನೀಡಿರುವುದಾಗಿ ಬಾಯ್ಬಿಟ್ಟಿದ್ದರು.
ಇನ್ನೊಂದೆಡೆ ‘ನನ್ನ ಮಗಳು ನಿರಪರಾಧಿಯಾಗಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ರಾಜ ರಘುವಂಶಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಪತ್ನಿ ಸೋನಮ್ ಅವರ ತಂದೆ ದೇವಿ ಸಿಂಗ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.