ADVERTISEMENT

ಯಾದವ ನಾಯಕರ ವಿರೋಧದಿಂದಲೇ ಮುಲಾಯಂ ಅವರಿಗೆ ಪ್ರಧಾನಿ ಪಟ್ಟ ಕೈತಪ್ಪಿತ್ತು!

ಶೆಮಿಜ್‌ ಜಾಯ್‌
Published 10 ಅಕ್ಟೋಬರ್ 2022, 10:40 IST
Last Updated 10 ಅಕ್ಟೋಬರ್ 2022, 10:40 IST
   

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರು ಅನಾರೋಗ್ಯದಿಂದ ಇಂದು ನಿಧನರಾದರು. ಜನತಾ ಪರಿವಾರದ ಪ್ರಭಾವಿ ನಾಯಕರಾಗಿದ್ದ ಮುಲಾಯಂ ಅವರಿಗೆ ಯಾದವ ನಾಯಕರ ವಿರೋಧದಿಂದಾಗಿಯೇ 1996ರಲ್ಲಿ ಪ್ರಧಾನಿ ಪಟ್ಟ ಕೈತಪ್ಪಿತ್ತು.

ವಿ.ಪಿ. ಸಿಂಗ್ ಅವರು ಪ್ರಧಾನಿ ಹುದ್ದೆಗೇರಲು ನಿರಾಕರಿಸಿದ ಬಳಿಕ ಜ್ಯೋತಿ ಬಸು ಅವರು ಉನ್ನತ ಹುದ್ದೆ ಅಲಂಕರಿಸುವುದನ್ನು ತಪ್ಪಿಸಲು ಸಿಪಿಎಂನ ಅಂದಿನ ಪ್ರಧಾನ ಕಾರ್ಯದರ್ಶಿ ಹರ್‌ಕಿಶೆನ್ ಸಿಂಗ್ ಅವರು, ಯುನೈಟೆಡ್ ಫ್ರಂಟ್‌ ಸರ್ಕಾರದ ಪ್ರಧಾನಿಯಾಗಿ ಮುಲಾಯಂ ಹೆಸರನ್ನು ಶಿಫಾರಸು ಮಾಡಿದ್ದರು.

13 ದಿನಗಳ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಪತನದ ಬಳಿಕ ಹೊಸ ಸರ್ಕಾರ ರಚನೆಯ ನೇತೃತ್ವ ವಹಿಸಲು ಕಾಂಗ್ರೆಸ್ ನಿರಾಕರಿಸಿತ್ತು. ಆ ಸಂದರ್ಭ ಯುನೈಟೆಡ್ ಫ್ರಂಟ್ ಅಸ್ತಿತ್ವಕ್ಕೆ ಬಂದಿತ್ತು.

ಮುಲಾಯಂ ಅವರನ್ನು ಪ್ರಧಾನಿ ಮಾಡಲು ಸುರ್ಜಿತ್ ತೀವ್ರ ಲಾಬಿ ನಡೆಸಿದ್ದರು. ಆದರೆ, ಲಾಲು ಪ್ರಸಾದ್ ಯಾದವ್ ಮತ್ತು ಶರದ ಯಾದವ್ ಅವರಿಗೆ ಇದು ಇಷ್ಟವಿರಲಿಲ್ಲ. ಲಾಲು ಸಹ ಪ್ರಧಾನಿಗಾದಿಯ ಆಕಾಂಕ್ಷಿಯಾಗಿದ್ದರು. ಆದರೆ ಮೇವು ಹಗರಣ ಅವರ ಮಹತ್ವಾಕಾಂಕ್ಷೆಗೆ ಬ್ರೇಕ್ ಹಾಕಿತ್ತು.

ADVERTISEMENT

ಜನತಾ ದಳದವರೇ ಆದ ಮುಲಾಯಂ ಪ್ರಧಾನಿ ಹುದ್ದೆಗೇರುವ ತಮ್ಮ ಸ್ಥಾನಮಾನ ಕಡಿಮೆ ಆಗುತ್ತದೆ ಎಂದು ಶರದ್ ಯಾದವ್ ಮತ್ತು ಲಾಲು ಭಾವಿಸಿದ್ದರು. ಆದರೆ, ಶರದ್ ಯಾದವ್, ಲಾಲು, ವಿ ಪಿ ಸಿಂಗ್ ಮತ್ತು ಎನ್ ಚಂದ್ರಬಾಬು ನಾಯ್ಡು ಅವರು ತಾವು ಉನ್ನತ ಹುದ್ದೆಗೆ ಏರುವ ಪ್ರಯತ್ಬವನ್ನು ವಿಫಲಗೊಳಿಸಿದ್ದಾರೆ ಎಂದು ಮುಲಾಯಂ ನಂಬಿದ್ದರು.

ಸುರ್ಜೀತ್ ಮತ್ತು ಮುಲಾಯಂ ದೀರ್ಘಕಾಲ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಮುಲಾಯಂ ಅವರಿಗೆ ಸುರ್ಜೀತ್ ಮತ್ತು ಬಸು ಇಬ್ಬರೂ ಗುರುಗಳಂತಿದ್ದರು. ಬಸು ಅವರ ನಿಧನದ ನಂತರ, 1996ರಲ್ಲಿ ಪ್ರಧಾನಿ ಹುದ್ದೆಗೆ ಬಸು ಅವರ ಹೆಸರನ್ನು ಸೂಚಿಸಿದ್ದೇ ಮುಲಾಯ, ಕೆಲ ವರದಿಗಳಲ್ಲಿ ಉಲ್ಲೇಖಿಸಿರುವಂತೆ ವಿಪಿ ಸಿಂಗ್ ಅಲ್ಲ ಎಂದು ಲೇಖನವೊಂದರಲ್ಲಿ ಬರೆಯಲಾಗಿದೆ.

2002ರಲ್ಲಿ ರಾಷ್ಟ್ರಪತಿ ಹುದ್ದೆಗೆ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಮೊದಲು ಸೂಚಿಸಿದ ಕೀರ್ತಿಯೂ ಮುಲಾಯಂ ಅವರದ್ದು.

ಮುಲಾಯಂ ಅವರು ಪ್ರಧಾನಿ ಹುದ್ದೆಯ ರೇಸ್‌ನಿಂದ ಹೊರಗುಳಿದ ಬಳಿಕ, ಎಚ್‌.ಡಿ ದೇವೇಗೌಡ ಅವರು ಇತರ ನಾಯಕರಿಂದ ಬೆಂಬಲ ಪಡೆದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಗೌಡರ ಸರ್ಕಾರ ಬಿದ್ದಾಗ ಮತ್ತೆ ಮುಲಾಯಂ ಅವರನ್ನು ಕಡೆಗಣಿಸಿ ಐ.ಕೆ. ಗುಜ್ರಾಲ್ ಅವರನ್ನು ಪ್ರಧಾನಿ ಹುದ್ದೆಗೆ ಏರಿಸಲಾಗಿತ್ತು.

ದೇವೇಗೌಡ ಮತ್ತು ಐ.ಕೆ. ಗುಜ್ರಾಲ್ ಅವರ ಎರಡೂ ಸರ್ಕಾರಗಳ ಅವಧಿಯಲ್ಲಿ ಮುಲಾಯಂ ಅವರು, ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿದರು. ದೇವೇಗೌಡರ ಸರ್ಕಾರದ ಅವಧಿಯಲ್ಲಿ ರಷ್ಯಾದೊಂದಿಗೆ ಸುಖೋಯ್ ಫೈಟರ್ ಜೆಟ್ ಒಪ್ಪಂದವನ್ನು ಅಂತಿಮಗೊಳಿಸಿದ್ದರು.

ಮಾಜಿ ಪ್ರಧಾನಿ ಚರಣ್ ಸಿಂಗ್ ಅವರು, ಮುಲಾಯಂ ಅವರನ್ನು ಬಾಲ ನೆಪೋಲಿಯನ್ ಎಂದು ಕರೆಯುತ್ತಿದ್ದರು ಎಂದು ಹಿರಿಯ ರಾಜಕಾರಣಿಗಳು ನೆನಪಿಸಿಕೊಳ್ಳುತ್ತಾರೆ.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.