ADVERTISEMENT

ಬೆಳಗಾವಿ ಗಡಿ ವಿವಾದ: ಮೋದಿ ಜೊತೆಗಿನ ಚರ್ಚೆಯನ್ನು ಶಿಂದೆ ಬಹಿರಂಗಗೊಳಿಸಲಿ–ರಾವುತ್

ಪಿಟಿಐ
Published 23 ನವೆಂಬರ್ 2022, 2:20 IST
Last Updated 23 ನವೆಂಬರ್ 2022, 2:20 IST
ರಾವುತ್
ರಾವುತ್   

ನವದೆಹಲಿ: ‘ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಬೆಳಗಾವಿ ಸೇರಿದಂತೆ ಕರ್ನಾಟಕ–ಮಹಾರಾಷ್ಟ್ರ ಗಡಿಗೆ ಮುಖ್ಯಮಂತ್ರಿ ಏಕನಾಥ್ ಶಿಂದೆ ಹಾಗೂ ಅವರಸಚಿವರು ಎಷ್ಟು ಬಾರಿ ಭೇಟಿ ನೀಡಿದ್ದಾರೆ?’ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಪ್ರಶ್ನಿಸಿದ್ದಾರೆ.

‘ಬೆಳಗಾವಿಯಲ್ಲಿ ಮರಾಠಿ ಜನರಿಗೆ ಅನ್ಯಾಯವಾಗುತ್ತಿದ್ದರೂ ಏಕನಾಥ್ ಶಿಂದೆ ಸಹಿಸಿಕೊಳ್ಳುತ್ತಿರುವುದು ಶಿವಾಜಿ ಮಹಾರಾಜರಿಗೆ ಮಾಡುತ್ತಿರುವ ಅವಮಾನವೇ ಆಗಿದೆ’ ಎಂದು ಅವರು ಕಿಡಿಕಾರಿದ್ದಾರೆ.ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನವಾಗಿ, ಜಾಮೀನು ಪಡೆದ ನಂತರ ಇದೇ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿದ ಸಮಯದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಏಕನಾಥ್ ಶಿಂದೆ ಬೆಳಗಾವಿ ಗಡಿ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ. ಭೇಟಿಯಾದರೆ ಗಡಿ ವಿವಾದದ ಬಗ್ಗೆ ಅವರ ನಿಲುವುಗಳನ್ನು ಹಾಗೂ ಏನು ಚರ್ಚೆಯಾಯಿತು ಎಂಬುದನ್ನುಬಹಿರಂಗಪಡಿಸಬೇಕು’ ಎಂದು ಏಕನಾಥ್ ಶಿಂದೆ ಅವರಿಗೆ ರಾವುತ್ ಸವಾಲು ಹಾಕಿದ್ದಾರೆ.

ADVERTISEMENT

ಗಡಿ ವಿವಾದದ ಬಗ್ಗೆ ಬೆಳಗಾವಿಯಲ್ಲಿ ಮರಾಠಿ ಯುವಕರ ಮೇಲೆ ಹಾಕಲಾಗಿರುವ ಸುಳ್ಳು ಪ್ರಕರಣಗಳನ್ನು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ವಾಪಸ್ ಪಡೆಯಬೇಕು ಎಂದು ರಾವುತ್ ಆಗ್ರಹಿಸಿದರು.

ಇಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ಕುರಿತು ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯು ಬುಧವಾರ ವಿಚಾರಣೆಗೆ ಬರಲಿದೆ. 2004 ರಲ್ಲಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ 18 ವರ್ಷಗಳ ಬಳಿಕ ನಡೆಯಲಿದೆ.ಬೆಳಗಾವಿ, ಬೀದರ್‌, ಭಾಲ್ಕಿ, ಕಾರವಾರ ಸೇರಿದಂತೆ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬುದು ಆ ರಾಜ್ಯದ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.