ಮನಮೋಹನ್ ಸಿಂಗ್
ಬೆಂಗಳೂರು: ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನಕ್ಕೆ ವಿದೇಶಿ ಗಣ್ಯರು ಸಾಮಾಜಿಕ ಮಾಧ್ಯಮಗಳ ಮೂಲಕ ಸಂತಾಪ ಸೂಚಿಸಿದ್ದಾರೆ.
2004ರಿಂದ 2014 ರವರೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಅಡಿಯಲ್ಲಿ ಎರಡು ಅವಧಿಗಳ ಕಾಲ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಮನಮೋಹನ್ ಸಿಂಗ್ ದೇಶವನ್ನು ಪುನರ್ ರೂಪಿಸಿದ್ದರು. ಈ ಅವಧಿಯಲ್ಲಿ ಅವರು ಹಲವು ದೇಶಗಳ ಗಣ್ಯ ನಾಯಕರ ಜೊತೆ ಆತ್ಮೀಯವಾದ ಬಾಂಧವ್ಯ ಹೊಂದಿದ್ದರು.
ಮನಮೋಹನ್ ಸಿಂಗ್ ನಿಧನಕ್ಕೆ ವಿದೇಶದ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.
ಅಮೆರಿಕದ ರಕ್ಷಣಾ ಇಲಾಖೆ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು, ಸಿಂಗ್ ಅವರು ಅಮೆರಿಕ-ಭಾರತ ನಡುವಿ ತಂತ್ರಜ್ಞಾನ ಸಹಭಾಗಿತ್ವಕ್ಕೆ ಅಡಿಪಾಯ ಹಾಕಿದರು. ಉಭಯ ದೇಶಗಳ ನಡುವಿನ ತಂತ್ರಜ್ಞಾನ ಅಭಿವೃದ್ದಿಗೆ ಸಿಂಗ್ ಕೊಡುಗೆ ಸಾಕಷ್ಟಿದೆ ಎಂದು ಸಂತಾಪ ಸೂಚಿಸಿ ಅವರು ಟ್ವೀಟ್ ಮಾಡಿದ್ದಾರೆ.
ಕೆನಡಾದ ಮಾಜಿ ಪ್ರಧಾನಮಂತ್ರಿ ಸ್ಟೀಫನ್ ಹಾರ್ಪರ್ ಅವರು ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಿಂಗ್ ಅವರ ನಾಯಕತ್ವ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಖ್ಯಾತಿಯನ್ನು ಹೆಚ್ಚಿಸಿತ್ತು. ಸಿಂಗ್ ಸರಳವಾಗಿ ಬದುಕಿ, ಅಪಾರ ಜ್ಞಾನ ಸಂಪಾದಿಸಿ ಅದನ್ನು ದೇಶಕ್ಕೆ ಅರ್ಪಸಿದರು ಎಂದು ಸ್ಟೀಫನ್ ಹಾರ್ಪರ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಫ್ಗಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಭಾರತ ದೇಶ ಪ್ರಸಿದ್ಧ ನಾಯಕನನ್ನು ಕಳೆದುಕೊಂಡಿದೆ. ಮನಮೋಹನ್ ಸಿಂಗ್ ಅಫ್ಗಾನಿಸ್ತಾನದ ಜನರಿಗೆ ಮಿತ್ರರಾಗಿದ್ದರು. ಅವರ ನಿಧನಕ್ಕೆ ಸಂತಾಪಗಳು ಎಂದು ಹೇಳಿದ್ದಾರೆ.
ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೊಹಮದ್ ನಶೀದ್ ಅವರು ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ನನ್ನ ಅವಧಿಯಲ್ಲಿ ಸಿಂಗ್ ಅವರು ನಮಗೆ ರಾಜತಾಂತ್ರಿಕ ವಿಷಯಗಳಲ್ಲಿ ಮಾರ್ಗದರ್ಶನ ನೀಡಿದ್ದರು. ವೈಯಕ್ತಿಕವಾಗಿ ನನಗೆ ತಂದೆಯಂತೇ ಇದ್ದರು. ಕರುಣಾಮಯಿ ಮತ್ತು ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂದು ಅವರು ಹೇಳಿದ್ದಾರೆ.
ಸಿಂಗ್ ನಿಧನಕ್ಕೆ ರಷ್ಯಾ ಮಾಜಿ ಪ್ರಧಾನ ಮಂತ್ರಿ ಡೆನೀಸ್ ಅಲಿಪೋವ್ ಕೂಡ ಸಂತಾಪ ಸೂಚಿಸಿದ್ದಾರೆ. ಭಾರತ-ರಷ್ಯಾ ಸಂಬಂಧಗಳನ್ನು ಬಲಪಡಿಸುವಲ್ಲಿ ಅವರ ಪ್ರಮುಖ ಪಾತ್ರವಹಿಸಿದ್ದರು. ಇದು ಭಾರತ ಮತ್ತು ರಷ್ಯಾಕ್ಕೂ ದುಃಖದ ಕ್ಷಣ, ನಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಸಿಂಗ್ ಕೊಡುಗೆ ಅಪಾರವಾಗಿತ್ತು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.