ADVERTISEMENT

ಅಮೆರಿಕದಲ್ಲಿ ಮೋದಿ ಮೋಡಿ; ಟ್ರಂಪ್‌ಗೆ ಚುನಾವಣೆ ಸಿದ್ಧತೆ

ಹೌಡಿ ಮೋದಿ

ರಾಯಿಟರ್ಸ್
Published 23 ಸೆಪ್ಟೆಂಬರ್ 2019, 2:42 IST
Last Updated 23 ಸೆಪ್ಟೆಂಬರ್ 2019, 2:42 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಹ್ಯೂಸ್ಟನ್: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರಿಗೆ‘ಹೌಡಿ ಮೋದಿ’ ಕಾರ್ಯಕ್ರಮವು ರಾಜಕೀಯವಾಗಿ ಅತ್ಯಂತ ಮಹತ್ವವಾದುದು. ಈ ಕಾರ್ಯಕ್ರಮದ ಮೂಲಕ ಇಬ್ಬರು ನಾಯಕರೂ ವಿಶ್ವಕ್ಕೆ ತಮ್ಮ ಸಂದೇಶಗಳನ್ನು ರವಾನಿಸಲು ಹೊರಟಿದ್ದಾರೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

‘ಹೌಡಿ ಮೋದಿ’ ಕಾರ್ಯಕ್ರಮವನ್ನು ಆಯೋಜಿಸಿರುವುದು ಟೆಕ್ಸಾಸ್‌ನಲ್ಲಿನ ಭಾರತೀಯ ಅಮೆರಿಕನ್ನರು. ನರೇಂದ್ರ ಮೋದಿ ಅವರ ಆಡಳಿತಕ್ಕೆ ಈ ಸಮುದಾಯ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಈಗಿನ ಸಂದರ್ಭದಲ್ಲಿ ಅತ್ಯಂತ ಮಹತ್ವದ ಅಂಶವಾಗಿದೆ ಎಂಬ ಅಭಿಪ್ರಾಯವು ಅಮೆರಿಕದ ಚಿಂತಕರ ಚಾವಡಿಯಲ್ಲಿ ವ್ಯಕ್ತವಾಗಿದೆ.

2020ರಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಆ ಚುನಾವಣೆಯ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಹೀಗಾಗಿ ಟೆಕ್ಸಾಸ್‌ನಲ್ಲಿನ ಭಾರತೀಯ ಅಮೆರಿಕನ್ನರ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಟ್ರಂಪ್‌ ಭಾಗವಹಿಸುವುದು ಅತ್ಯಂತ ಮಹತ್ವ ಪಡೆದಿದೆ ಎಂದು ಜಾನ್‌ ಹಾಕಿನ್ಸ್ ವಿಶ್ವವಿದ್ಯಾಲಯದ ಏಷ್ಯಾ ವಿಭಾಗದ ನಿರ್ದೇಶಕ ದೇವೇಶ್‌ ಕುಮಾರ್ ಹೇಳಿದ್ದಾರೆ.

ಮೋದಿ ಪ್ರತಿಪಾದನೆಗೆ ಬಲ...

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಅಧಿಕಾರ ತೆಗೆದುಹಾಕಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಎದುರಿಸುತ್ತಿರುವ ಮೊದಲ ಸಾರ್ವಜನಿಕ ಕಾರ್ಯಕ್ರಮ ಇದು. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಅನಿವಾಸಿ ಭಾರತೀಯ ಸಮುದಾಯವು ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ‘ಹೌಡಿ ಮೋದಿ’ ಪ್ರತಿಬಿಂಬಿಸುತ್ತದೆ.

ಸರ್ಕಾರದ ಈ ನಿರ್ಧಾರಕ್ಕೆ ದೇಶದೊಳಗೆ ಬೆಂಬಲ ವ್ಯಕ್ತವಾದಂತೆ, ವಿರೋಧವೂ ವ್ಯಕ್ತವಾಗಿತ್ತು. ‘ಭಾರತದ ಈ ಏಕಪಕ್ಷೀಯ ನಡೆ ಸರಿಯಲ್ಲ’ ಎಂಬರ್ಥದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವು ಸದ್ದು ಮಾಡಿತು. ಪಾಕಿಸ್ತಾನಕ್ಕೆ ಚೀನಾ ಬೆಂಬಲ ನೀಡಿತು.

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ತನ್ನ ಮಧ್ಯಸ್ಥಿಕೆ ಮೂಲಕ ಕಾಶ್ಮೀರ ಸಮಸ್ಯೆ ಬಗೆಹರಿಯಲಿ ಎಂಬ ಮಾತುಗಳು ಟ್ರಂಪ್‌ ಅವರಿಂದ ಬಂದಿತ್ತು. ಇದನ್ನು ಭಾರತವು ಕಟುವಾಗಿ ವಿರೋಧಿಸಿತ್ತು. ಹಾಗೂ ವಿಶೇಷಾಧಿಕಾರ ತೆಗೆದುಹಾಕುವ ನಿರ್ಧಾರ ತನ್ನ ಆಂತರಿಕ ವಿಚಾರ ಎಂದು ಭಾರತವು ಪ್ರಬಲವಾಗಿ ಪ್ರತಿಪಾದಿಸಿತು.

ರಷ್ಯಾ ಸಹ ಈ ವಿಚಾರದಲ್ಲಿ ಭಾರತಕ್ಕಾಗಲೀ, ಪಾಕಿಸ್ತಾನಕ್ಕಾಗಲೀ ಬೆಂಬಲ ನೀಡಲಿಲ್ಲ. ಬದಲಿಗೆ ಇದು ಎರಡು ದೇಶಗಳ ಸಮಸ್ಯೆ, ಇದನ್ನು ದ್ವಿಪಕ್ಷೀಯವಾಗೇ ಬಗೆಹರಿಸಿಕೊಳ್ಳಬೇಕು. ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಹೇಳಿತು.

ಕಾಶ್ಮೀರದ ವಿಚಾರದಲ್ಲಿ ನರೇಂದ್ರ ಮೋದಿ ಸರ್ಕಾರದ ನಿರ್ಧಾರವನ್ನು ಜಾಗತಿಕ ಶಕ್ತಿಗಳು ಸ್ಪಷ್ಟವಾಗಿ ವಿರೋಧಿಸಲೂ ಇಲ್ಲ, ಸ್ಪಷ್ಟವಾಗಿ ಬೆಂಬಲಿಸಲೂ ಇಲ್ಲ. ಈ ವಿಚಾರದಲ್ಲಿ ತಮ್ಮ ನಿರ್ಧಾರ ಸರಿಯಾದುದು. ಇದನ್ನು ಭಾರತೀಯರು ಒಪ್ಪಿಕೊಂಡಿದ್ದಾರೆ ಎಂಬ ಸಂದೇಶವನ್ನು ವಿಶ್ವಕ್ಕೆ ರವಾನಿಸುವ ಅವಶ್ಯಕತೆ ಮೋದಿ ಅವರಿಗೆ ಇತ್ತು. ಈಗ ಆ ಸಂದೇಶವನ್ನು ಮೋದಿ ಅವರು ‘ಹೌಡಿ ಮೋದಿ’ ಮೂಲಕ ರವಾನಿಸಲಿದ್ದಾರೆ.

ಇದೇ ವಾರದಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸಲು ಪಾಕಿಸ್ತಾನ ಸಿದ್ಧತೆ ನಡೆಸಿದೆ. ಈ ಕಾರ್ಯಕ್ರಮದಲ್ಲಿ ಮೋದಿ ಅವರಿಗೆ ದೊರೆಯುವ ಬೆಂಬಲವು, ವಿಶ್ವಸಂಸ್ಥೆಯಲ್ಲಿ ಅವರ ಪ್ರತಿಪಾದನೆಯನ್ನು ಬಲಪಡಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಟ್ರಂಪ್‌ಗೆ ಚುನಾವಣೆ ಸಿದ್ಧತೆ

ಡೊನಾಲ್ಡ್‌ ಟ್ರಂಪ್‘ಮೊದಲು ಅಮೆರಿಕನ್ನರು’ (ಅಮೆರಿಕನ್ಸ್‌ ಫರ್ಸ್ಟ್‌) ನಿಲುವಿನೊಂದಿಗೆ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬಂದವರು. ವಲಸಿಗರ ಬಗ್ಗೆ ಟ್ರಂಪ್‌ ಅವರು ಹಲವು ಬಾರಿ ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಲಸೆಯನ್ನು ತಡೆಯುವಂತಹ ಹಲವು ನೀತಿಗಳನ್ನು ಟ್ರಂಪ್‌ ಜಾರಿಗೆ ತಂದಿದ್ದಾರೆ. ವೀಸಾ ನೀತಿ ಮತ್ತು ಉದ್ಯೋಗ ನೀತಿಗಳನ್ನು ಈ ಉದ್ದೇಶದಿಂದಲೇ ಮಾರ್ಪಡಿಸಿದ್ದಾರೆ.

ಆದರೆ ಈಗ ಅವರು ಭಾಗವಹಿಸುತ್ತಿರುವ ‘ಹೌಡಿ ಮೋದಿ’ ಕಾರ್ಯಕ್ರಮದ ಆಯೋಜಕರು ಭಾರತೀಯ ಅಮೆರಿಕನ್ನರೇ ಆಗಿದ್ದಾರೆ. ಹೀಗಾಗಿ ವಲಸಿಗ ಸಮುದಾಯದ ಕಾರ್ಯಕ್ರಮದಲ್ಲಿ ಟ್ರಂಪ್ ಅವರು ಭಾಗಿಯಾಗುವುದು ಹೆಚ್ಚು ಸದ್ದು ಮಾಡಿದೆ.

ಟೆಕ್ಸಾಸ್‌ನಲ್ಲಿನ ವಲಸಿಗರಲ್ಲಿ ಭಾರತೀಯ ಅಮೆರಿಕನ್ನರದ್ದೇ ದೊಡ್ಡಸಮುದಾಯ. 3 ಲಕ್ಷ ಜನಕ್ಕಿಂತಲೂ ಹೆಚ್ಚು ದೊಡ್ಡದಿರುವ ಸಮುದಾಯವಿದು. ಟೆಕ್ಸಾಸ್‌ನ ಚುನಾವಣಾ ರಾಜಕಾರಣದ ಭವಿಷ್ಯವನ್ನು ಬದಲಿಸುವ ಶಕ್ತಿ ಈ ಸಮುದಾಯಕ್ಕೆ ಇದೆ. ಈ ಹಿಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್ ಅವರ ಎದುರಾಳಿ, ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಅವರನ್ನು ಈ ಜನರು ಬೆಂಬಲಿಸಿದ್ದರು. ಈ ಸಮುದಾಯದ ಶೇ 75ಕ್ಕಿಂತಲೂ ಹೆಚ್ಚು ಜನರು ಹಿಲರಿ ಅವರಿಗೆ ಮತ ನೀಡಿದ್ದರು. ಅಲ್ಲದೆ ಹಿಲರಿ ಅವರಿಗೆ ಈ ಜನರಿಂದ ಹೆಚ್ಚಿನ ದೇಣಿಗೆ ಸಂದಾಯವಾಗಿತ್ತು.

ಟ್ರಂಪ್‌ ಅವರೂ ಮತವನ್ನು ಗಮನದಲ್ಲಿ ಇರಿಸಿಕೊಂಡೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಎನ್ನಲಾಗಿದೆ. ಮುಂದಿನ ಚುನಾವಣೆಯಲ್ಲಿ ಟ್ರಂಪ್ ಅವರು ಮರುಆಯ್ಕೆ ಬಯಸಿದ್ದಾರೆ. ಆದರೆ ಅದು ಕಷ್ಟಸಾಧ್ಯ. ಹೀಗಾಗಿ ಅವರು ತಮ್ಮ ವಲಸೆ ನೀತಿಯನ್ನು ಸಡಿಲಗೊಳಿಸಿದ್ದಾರೆ. ಈ ಮೂಲಕ ಅಮೆರಿಕದಲ್ಲಿರುವ ವಲಸಿಗರನ್ನು ತಮ್ಮತ್ತ ಸೆಳೆಯುವ ಉದ್ದೇಶ ಟ್ರಂಪ್‌ ಅವರದ್ದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಭಾರತೀಯ ಅಮೆರಿಕನ್ನರ ಬಗ್ಗೆ ಟ್ರಂಪ್‌ ಅವರು ಹೆಚ್ಚು ಸಹಾನುಭೂತಿ ಹೊಂದಿದ್ದಾರೆ ಎಂಬ ಅಭಿಪ್ರಾಯ ಈಗಾಗಲೇ ಅಮೆರಿಕದ ವಲಸಿಗರ ಮಧ್ಯೆ ಹರಿದಾಡುತ್ತಿದೆ. ‘ಹೌಡಿ ಮೋದಿ’ ಈ ಅಭಿಪ್ರಾಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಆದರೆ ಡೆಮಾಕ್ರಟಿಕ್‍ಪಕ್ಷದ ಬಗೆಗಿನ ಈ ಜನರ ಒಲವನ್ನು ಟ್ರಂಪ್‌ ಗಳಿಸುವುದು ಕಡುಕಷ್ಟ ಎಂದೂ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.