ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆ ಆವರಣದಲ್ಲಿ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರ ಮೇಲೆ ಕಾಂಗ್ರೆಸ್ ಶಾಸಕರು ಶುಕ್ರವಾರ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಐವರು ಕಾಂಗ್ರೆಸ್ ಶಾಸಕರನ್ನು ಈ ಬಜೆಟ್ ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಲಾಗಿದೆ.
‘ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಭಾರದ್ವಾಜ್ ಅವರು ಮಂಡಿಸಿದ ಸೂಚನೆಯನ್ನು ಪರಿಗಣಿಸಿ, ವಿರೋಧ ಪಕ್ಷದ ನಾಯಕ ಮುಕೇಶ್ ಅಗ್ನಿಹೋತ್ರಿ, ಹರ್ಷವರ್ಧನ್ ಚೌಹಾಣ್, ಸುಂದರ್‌ಸಿಂಗ್ ಠಾಕೂರ್, ಸತ್ಪಾಲ್ ರಾಯ್ಜಾದ ಹಾಗೂ ವಿನಯಕುಮಾರ್ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಸ್ಪೀಕರ್ ವಿಪಿನ್ ಪರ್ಮಾರ್ ಪ್ರಕಟಿಸಿದರು.
ಅಮಾನತುಗೊಳಿಸಿರುವ ವಿಷಯವನ್ನು ಪ್ರಕಟಿಸಿದ ಸಂದರ್ಭದಲ್ಲಿ ಕಾಂಗ್ರೆಸ್‌ನ ಶಾಸಕರು ಸದನದಲ್ಲಿ ಇರಲಿಲ್ಲ.
ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಸದನವನ್ನು ಉದ್ಧೇಶಿಸಿ ಮಾತನಾಡಿದ ನಂತರ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ನಿರ್ಗಮಿಸುತ್ತಿದ್ದರು. ಅವರು ಸ್ಪೀಕರ್ ಅವರ ಕೊಠಡಿ ಬಳಿ ಸಾಗುತ್ತಿದ್ದಾಗ ವಿರೋಧ ಪಕ್ಷದ ಶಾಸಕರು ಅವರನ್ನು ತಡೆಯಲು ಯತ್ನಿಸಿದರು ಎನ್ನಲಾಗಿದೆ.
‘ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಯಲ್ಲಿ ಪಕ್ಷ ಕಳಪೆ ಸಾಧನೆ ಮಾಡಿದೆ. ಇದರಿಂದ ಹತಾಶೆಗೊಂಡಿರುವ ಕಾಂಗ್ರೆಸ್ ಶಾಸಕರು ಇಂಥ ಕೃತ್ಯವೆಸಗಿದ್ದಾರೆ. ಶಾಸಕರ ಈ ಕೃತ್ಯ ರಾಜ್ಯಪಾಲರ ಮೇಲೆ ನಡೆಸಿದ ಹಲ್ಲೆ ಎಂದು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹೇಳಿದ್ದಾರೆ’ ಎಂದು ಸಚಿವ ಭಾರದ್ವಾಜ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.