
ನವದೆಹಲಿ: 14 ವರ್ಷದ ಹೆಣ್ಣುಮಕ್ಕಳಿಗೆ ಎಚ್‌ಪಿವಿ ಲಸಿಕೆ (ಗರ್ಭಕಂಠದ ಕ್ಯಾನ್ಸರ್ ತಡೆಯಲು) ನೀಡುವ ವಿಶೇಷ ಅಭಿಯಾನವನ್ನು ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ಆರಂಭಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರತಿವರ್ಷ ಎಲ್ಲ ಸಾಮಾಜಿಕ–ಆರ್ಥಿಕ ವರ್ಗದ 1.15 ಕೋಟಿ ಹೆಣ್ಣುಮಕ್ಕಳಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಮಾಹಿತಿ ನೀಡಿವೆ.
ಭಾರತೀಯ ಮಹಿಳೆಯರಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಪ್ರಮಾಣ ಎರಡನೆಯದಾಗಿದೆ. ಹೆಣ್ಣುಮಕ್ಕಳನ್ನು ಇದರ ಕಬಂಧಬಾಹುವಿನಿಂದ ರಕ್ಷಿಸುವ ಉದ್ದೇಶದಿಂದ ವರ್ಷಗಟ್ಟಲೆ ಲಸಿಕೆಯ ಪರೀಕ್ಷೆ ನಡೆಸಿದ್ದ ಕೇಂದ್ರ ಸರ್ಕಾರ, ಸದ್ಯ ಈ ವಾರದಿಂದಲೇ ರಾಷ್ಟ್ರದಾದ್ಯಂತ ಲಸಿಕೆ ಅಭಿಯಾನ ಆರಂಭಿಸಲು ಮುಂದಾಗಿದೆ.
ಇದು ವಿಶೇಷ ಅಭಿಯಾನವಾಗಿದ್ದು, ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದ ಭಾಗ ಅಲ್ಲ. ಮೆರ್ಕ್ ಕಂಪನಿಯ ಗಾರ್ಡಸಿಲ್ ಲಸಿಕೆಯನ್ನು ಪೂರೈಸಲಾಗುತ್ತದೆ.
ಜನನ ಪ್ರಮಾಣಪತ್ರ, ಆಧಾರ್ ಅಥವಾ ಪಡಿತರ ಚೀಟಿಯಂತಹ ಸರ್ಕಾರಿ ಗುರುತಿನ ಚೀಟಿಯ ಮೇಲೆ ನಮೂದಾಗಿರುವ ಜನ್ಮ ದಿನಾಂಕದ ಆಧಾರದಲ್ಲಿ ವಯಸ್ಸನ್ನು ನಿರ್ಧರಿಸಿ ಲಸಿಕೆಯನ್ನು ವಿತರಿಸಲಾಗುತ್ತದೆ.
ಈ ಲಸಿಕೆಯು ಜಗತ್ತಿನಾದ್ಯಂತ ವ್ಯಾಪಕವಾಗಿ ಸಂಶೋಧನೆಗೆ ಒಳಪಟ್ಟಿದ್ದು, ಶೇ 93–100ರಷ್ಟು ಪರಿಣಾಮಕಾರಿಯಾಗಿ ಕ್ಯಾನ್ಸರ್ ತಡೆಗಟ್ಟುತ್ತದೆ ಎಂದು ದೃಢಪಟ್ಟಿದೆ.
‘ಶಿಫಾರಸು ಮಾಡಲಾದ ನಿರ್ದಿಷ್ಟ ವಯೋಮಾನದ ಹೆಣ್ಣುಮಕ್ಕಳಿಗೆ ಈ ಲಸಿಕೆ ನೀಡಿದಲ್ಲಿ ಗರ್ಭಕಂಠ ಕ್ಯಾನ್ಸರ್‌ನಿಂದ ದೀರ್ಘಕಾಲದವರೆಗೆ ರಕ್ಷಣೆ ಪಡೆಯಬಹುದು ಎಂದು ಜಾಗತಿಕ ಮತ್ತು ಭಾರತೀಯ ವೈಜ್ಞಾನಿಕ ಸಾಕ್ಷ್ಯಗಳು ದೃಢಪಡಿಸಿವೆ’ ಎಂದು ಮೂಲಗಳು ತಿಳಿಸಿವೆ.
ಈ ಲಸಿಕೆ ವಿತರಣೆಗೆ 2006ರಲ್ಲಿ ಪರವಾನಗಿ ಲಭಿಸಿದ್ದು, ಈವರೆಗೆ ಜಗತ್ತಿನಾದ್ಯಂತ 50 ಕೋಟಿ ಡೋಸ್ ಪೂರೈಕೆ ಮಾಡಲಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024ರ ಬಜೆಟ್ ಭಾಷಣದಲ್ಲಿ ಎಚ್‌ಪಿವಿ ಲಸಿಕೆ ಅಭಿಯಾನದ ಬಗ್ಗೆ ಘೋಷಣೆ ಮಾಡಿದ್ದರು. ಇದಾದ ಎರಡು ವರ್ಷಗಳ ಬಳಿಕ ಯೋಜನೆಯು ಅನುಷ್ಠಾನಗೊಳ್ಳುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.