ADVERTISEMENT

'ನಾನು ಅವಮಾನಿತನಾಗಿದ್ದೇನೆ': ರಾಜೀನಾಮೆ ಬಳಿಕ ಅಮರೀಂದರ್ ಸಿಂಗ್ ಪ್ರತಿಕ್ರಿಯೆ

ಪಿಟಿಐ
Published 18 ಸೆಪ್ಟೆಂಬರ್ 2021, 14:37 IST
Last Updated 18 ಸೆಪ್ಟೆಂಬರ್ 2021, 14:37 IST
   

ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಅಮರೀಂದರ್ ಸಿಂಗ್ ಇಂದು ರಾಜೀನಾಮೆ ನೀಡಿದ್ದು, 'ನಾನು ಅವಮಾನಿತನಾಗಿದ್ದೇನೆ. ಮುಂದಿನ ರಾಜಕೀಯ ಭವಿಷ್ಯವು ಯಾವಾಗಲೂ ಆಯ್ಕೆಯಾಗಿರುತ್ತದೆ' ಎಂದು ಹೇಳಿದ್ದಾರೆ.

ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದ ನಂತರ ಪಂಜಾಬ್ ರಾಜಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಮರೀಂದರ್ ಸಿಂಗ್, 'ನನಗೆ ಅವಮಾನವಾಗಿದೆ. ರಾಜಕೀಯ ಭವಿಷ್ಯಕ್ಕೆ ಸಂಬಂಧಿಸಿ ಮಾತನಾಡುವುದಾದರೆ, ನನ್ನ ಮುಂದೆ ಸದಾ ಆಯ್ಕೆಗಳಿರುತ್ತದೆ. ಅವಕಾಶ ಬಂದಾಗ ಅದನ್ನು ಉಪಯೋಗಿಸುತ್ತೇನೆ' ಎಂದಿದ್ದಾರೆ.

ತಮ್ಮ ಸಂಪುಟದ ಮಂತ್ರಿಗಳೊಂದಿಗೆ ತೆರಳಿ ಅಮರೀಂದರೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಅವರ ಮಾಧ್ಯಮ ಸಲಹೆಗಾರ ತಿಳಿಸಿದ್ದಾರೆ.

ADVERTISEMENT

'ಪಕ್ಷವು ಶಾಸಕರನ್ನು ಕರೆದಿರುವುದು ಇದು ಮೂರನೇ ಬಾರಿ. ಅವರಿಗೆ ನನ್ನ ಮೇಲೆ ಸಂಶಯವಿತ್ತು. ನಾನು ಸದ್ಯ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ನಾನು ನನ್ನ ಬೆಂಬಲಿಗರೊಂದಿಗೆ ಮಾತನಾಡುತ್ತೇನೆ. ನಂತರ ಮುಂದಿನ ರಾಜಕೀಯದ ಭವಿಷ್ಯದ ಹಾದಿಯನ್ನು ನಿರ್ಧರಿಸುತ್ತೇನೆ' ಎಂದು ಅವರು ಹೇಳಿದರು.

ಇಂದು ಬೆಳಿಗ್ಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೆ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೂ ಮಾತನಾಡಿ ನನ್ನ ನಿರ್ಧಾರದ ಬಗ್ಗೆ ತಿಳಿಸಿದ್ದ ಎಂದು ಹೇಳಿದ್ದಾರೆ.

'ನನ್ನ ತಂದೆ ರಾಜಭವನಕ್ಕೆ ತೆರಳಿ ಪಂಜಾಬ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನಮ್ಮ ಕುಟುಂಬದ ಮುಖ್ಯಸ್ಥರಾಗಿ ನಮ್ಮನ್ನು ಹೊಸ ಆರಂಭಕ್ಕೆ ಕರೆದೊಯ್ಯಲು ಮುಂದಾಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ' ಎಂದು ರಣೀಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.