ADVERTISEMENT

ಹೈದರಾಬಾದ್‌: ಇರುವೆಗೆ ಹೆದರಿ ಆತ್ಮಹತ್ಯೆಗೆ ಶರಣಾದ ಮಹಿಳೆ!

ಪಿಟಿಐ
Published 6 ನವೆಂಬರ್ 2025, 15:35 IST
Last Updated 6 ನವೆಂಬರ್ 2025, 15:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್‌: ಮನುಷ್ಯನ ಭಯ ಆತನನ್ನು ಯಾವ ಹಂತಕ್ಕೆ ಬೇಕಾದರೂ ಕೊಂಡೊಯ್ಯಬಲ್ಲದು. ಕೆಲವೊಮ್ಮೆ ಅದೇ ಜೀವಕ್ಕೆ ಸಂಚಕಾರವನ್ನೂ ತರಬಲ್ಲದು. ಅಂಥದ್ದೇ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಇರುವೆಗಳ ಮೇಲಿನ ಭಯದಿಂದಾಗಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಂಗಾರೆಡ್ಡಿ ಜಿಲ್ಲೆಯ ನಿವಾಸಿಯಾಗಿದ್ದ 25 ವರ್ಷದ ಮಹಿಳೆ ಇರುವೆಗಳನ್ನು ಕಂಡರೆ ಭಯಪಡುವ ಮಾನಸಿಕ ಸಮಸ್ಯೆಯಿಂದ (ಮೈರ್ಮೆಕೊಫೋಬಿಯಾ) ಬಾಲ್ಯದಿಂದಲೂ ಬಳಲುತ್ತಿದ್ದರು. 2022ರಲ್ಲಿ ಮದುವೆಯಾಗಿದ್ದ ಅವರಿಗೆ 3 ವರ್ಷದ ಹೆಣ್ಣು ಮಗುವೂ ಇತ್ತು. 

ನವೆಂಬರ್‌ 4ರಂದು ಮಹಿಳೆಯು, ಮನೆ ಶುಚಿಗೊಳಿಸಿದ ಬಳಿಕ ಮಗುವನ್ನು ಕರೆದುಕೊಂಡು ಹೋಗುವುದಾಗಿ ತಿಳಿಸಿ ಸಂಬಂಧಿಕರ ಮನೆಯಲ್ಲಿ ಮಗುವನ್ನು ಬಿಟ್ಟು ವಾಪಸಾಗಿದ್ದರು. ಆದರೆ, ಸಂಜೆ ಮಹಿಳೆಯ ಪತಿ ಮನೆಗೆ ಬಂದು ನೋಡುವಷ್ಟರಲ್ಲಿ ಆಕೆ ಮರಣಪತ್ರ ಬರೆದಿಟ್ಟು ನೇಣುಹಾಕಿಕೊಂಡಿದ್ದರು. 

ADVERTISEMENT

‘ನನ್ನನ್ನು ಕ್ಷಮಿಸಿ, ಈ ಇರುವೆಗಳ ಜತೆಗೆ ಜೀವಿಸಲು ನನಗೆ ಸಾಧ್ಯವಾಗುತ್ತಿಲ್ಲ. ನನ್ನ ಮಗಳನ್ನು ಜೋಪಾನವಾಗಿ ನೋಡಿಕೊಳ್ಳಿ. ಅನ್ನಾವರಂ, ತಿರುಪತಿಗೆ ₹1,116 ಕಾಣಿಕೆ ಹಾಗೂ ಎಲ್ಲಮ್ಮಾ ದೇವಿಗೆ ಮಡಿಲಕ್ಕಿ ನೀಡುವ ಹರಕೆಗಳನ್ನು ಮರೆಯದಿರಿ’ ಎಂದೂ ಮಹಿಳೆ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. 

ಮನೆ ಶುಚಿಗೊಳಿಸುವಾಗ ಮಹಿಳೆ ಇರುವೆಗಳನ್ನು ನೋಡಿರುವ ಸಾಧ್ಯತೆ ಇದೆ. ಇರುವೆಗಳನ್ನು ನೋಡಿದ ಭಯದಲ್ಲಿ ಆಕೆ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.