ADVERTISEMENT

ಸಂಗಾತಿಯನ್ನು ಕೊಂದು, ದೇಹ ಭಾಗಗಳನ್ನು ತುಂಡರಿಸಿ ಫ್ರಿಡ್ಜ್‌ನಲ್ಲಿ ಇಟ್ಟ ವ್ಯಕ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮೇ 2023, 5:39 IST
Last Updated 25 ಮೇ 2023, 5:39 IST
   

ಹೈದರಾಬಾದ್‌: ಇಡೀ ದೇಶದ ಗಮನ ಸೆಳೆದಿದ್ದ ಶ್ರದ್ಧಾ ವಾಲಕರ್‌ ಹಾಗೂ ನಿಕ್ಕಿ ಯಾದವ್‌ ಭೀಕರ ಕೊಲೆಯನ್ನು ಹೋಲುವ ಪ್ರಕರಣ ಹೈದರಾಬಾದ್‌ನಲ್ಲಿ ನಡೆದಿದೆ.

ವ್ಯಕ್ತಿಯೊಬ್ಬ ತನ್ನ ಸಹಜೀವನ ಸಂಗಾತಿಯನ್ನು ಕೊಲೆ ಮಾಡಿ, ದೇಹದ ಭಾಗಗಳನ್ನು ತುಂಡರಿಸಿ ಫ್ರಿಡ್ಜ್‌ನಲ್ಲಿ ಇರಿಸಿದ್ದಾರೆ.

ಮೇ 17 ರಂದು ಹೈದರಾಬಾದ್‌ನ ಮುಸಿ ನದಿ ಬಳಿ ರುಂಡವೊಂದು ಪತ್ತೆಯಾಗಿದ್ದು, ತನಿಖೆ ಮಾಡಿದಾಗ ಪೊಲೀಸರಿಗೆ ವಿಷಯ ಗೊತ್ತಾಗಿದೆ.

ADVERTISEMENT

ಘಟನೆ ಸಂಬಂಧ ಬಿ. ಚಂದ್ರಮೋಹನ್‌ (48) ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಟಾಕ್‌ ಮಾರುಕಟ್ಟೆಯಲ್ಲಿ ಆನ್‌ಲೈನ್‌ ಟ್ರೇಡಿಂಗ್‌ ನಡೆಸುತ್ತಿದ್ದ ಈತನಿಗೆ 55 ವರ್ಷದ ಯರ್ರಂ ಅನುರಾಧ ರೆಡ್ಡಿ ಎಂಬರ ಜತೆ ಕಳೆದ 15 ವರ್ಷಗಳಿಂದ ಅನೈತಿಕ ಸಂಬಂಧ ಇತ್ತು. ಗಂಡನಿಂದ ಬೇರೆಯಾಗಿದ್ದ ಅನುರಾಧ ಆರೋಪಿ ಚಂದ್ರಮೋಹನ್‌ ಜತೆಗೆ ದಿಲ್‌ಖುಷ್‌ ನಗರದಲ್ಲಿರುವ ಚೈತನ್ಯಪುರಿ ಕಾಲೋನಿಯಲ್ಲಿ ವಾಸವಾಗಿದ್ದರು.

ಬಡ್ಡಿಗೆ ಹಣ ನೀಡುತ್ತಿದ್ದ ಅನುರಾಧ, ಮೋಹನ್‌ಗೂ 7 ಲಕ್ಷ ಸಾಲ ನೀಡಿದ್ದರು. ಈ ನಡುವೆ ಹಣ ಹಿಂದಿರುಗಿಸಲು ಒತ್ತಾಯಿಸಿದ್ದಾರೆ. ಈ ವೇಳೆ ಅವರನ್ನು ಕೊಲೆ ಮಾಡಲು ಚಂದ್ರಮೋಹನ್ ಯೋಜನೆ ಹಾಕಿಕೊಂಡಿದ್ದಾನೆ.

ಮೇ 12 ರಂದು ಇವರಿಬ್ಬರ ನಡುವೆ ಮನೆಯಲ್ಲಿಯೇ ಜಗಳ ನಡೆದಿದ್ದು, ಈ ವೇಳೆ ಆರೋಪಿ, ಅನುರಾಧ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಎದೆ ಹಾಗೂ ಹೊಟ್ಟೆಗೆ ಗಂಭೀರ ಗಾಯ ಉಂಟಾಗಿ ಅನುರಾಧ ಸಾವಿಗೀಡಾಗಿದ್ದಾರೆ.

ಕೊಲೆ ಮಾಡಿದ ಬಳಿಕ ಆತ, ಸಣ್ಣ ಕಲ್ಲು ತುಂಡರಿಸುವ ಯಂತ್ರ ತಂದು, ದೇಹವನ್ನು ತುಂಡು ತುಂಡು ಮಾಡಿದ್ದಾನೆ. ರುಂಡವನ್ನು ಕತ್ತರಿಸಿ ಪಾಲಿಥಿನ್‌ ಚೀಲದಲ್ಲಿ ಸುತ್ತಿಟ್ಟಿದ್ದಾನೆ. ಕೈ, ಕಾಲುಗಳನ್ನು ತುಂಡರಿಸಿ ಫ್ರಿಡ್ಜ್‌ನಲ್ಲಿ ಇರಿಸಿದ್ದಾನೆ.

ಮೇ 15 ರಂದು ಆಟೋ ರಿಕ್ಷಾವೊಂದರಲ್ಲಿ ತೆರಳಿ ರುಂಡವನ್ನು ಮುಸಿ ನದಿ ಬಳಿ ಎಸೆದಿದ್ದಾನೆ. ಈ ನಡುವೆ ಪಿನಾಯಿಲ್‌, ಕರ್ಪೂರ, ಆಗರಬತ್ತಿಗಳನ್ನು ತಂದು ದೇಹದ ಭಾಗಗಳಿಗೆ ಸಿಂಪಡಿಸಿ, ದುರ್ನಾತ ಬೀರದಂತೆ ನೋಡಿಕೊಂಡಿದ್ದಾನೆ. ತುಂಡು ಮಾಡಿರುವ ದೇಹದ ಭಾಗಗಳನ್ನು ವಿಲೇವಾರಿ ಮಾಡುವ ಬಗ್ಗೆ ಯೂಟ್ಯೂಬ್‌ನಲ್ಲಿ ವಿಡಿಯೊ ನೋಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಇದೇ ವೇಳೆ ಅನುರಾಧ ಇನ್ನೂ ಬದುಕಿದ್ದಾರೆ ಎಂದು ನಂಬಿಸಲು, ಅವರ ಪರಿಚಯಸ್ಥರಿಗೆ ಆಗಾಗ್ಗೆ ಮೆಸೇಜ್‌ ಕೂಡ ಮಾಡುತ್ತಿದ್ದ.

ಮೇ 17 ರಂದು ಮುಸಿ ನದಿ ಬಳಿಕ ಕಸ ವಿಲೇವಾರಿ ಮಾಡುತ್ತಿದ್ದ ಪೌರ ಕಾರ್ಮಿಕರಿಗೆ ರುಂಡ ಕಂಡು ಬಂದಿದೆ. ಅವರು ನೀಡಿದ ಮಾಹಿತಿ ಅನ್ವಯ ಮಾಲಕ್‌ಪೇಟ್‌ ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಹಲವು ಸಿಸಿಟಿವಿ ದೃಶ್ಯಾವಳಿಗಳು, ತಂತ್ರಜ್ಞಾನಗಳ ಮೊರೆ ಹೋದ ‍ಪೊಲೀಸರು, ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು, ಪೊಲೀಸರು ಸಂತ್ರಸ್ತೆ ದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.