ADVERTISEMENT

ಹೈದರಾಬಾದ್‌ ಮೇಯರ್‌ ಪಟ್ಟ ಬಿಜೆಪಿಗೆ: ಅಮಿತ್‌ ಶಾ

ಗ್ರೇಟರ್‌ ಹೈದರಾಬಾದ್‌ ಮಹಾನಗರ ಪಾಲಿಕೆ (ಜಿಎಚ್‌ಎಂಸಿ) ಚುನಾವಣೆ ಪ್ರಚಾರ ನಡೆಸಿದ ಗೃಹಸಚಿವ

ಪಿಟಿಐ
Published 29 ನವೆಂಬರ್ 2020, 14:25 IST
Last Updated 29 ನವೆಂಬರ್ 2020, 14:25 IST
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರೋಡ್‌ ಶೋ ವೇಳೆ ಸೇರಿದ್ದ ಕಾರ್ಯಕರ್ತರತ್ತ ಕೈ ಬೀಸಿದರು –ಪಿಟಿಐ ಚಿತ್ರ
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರೋಡ್‌ ಶೋ ವೇಳೆ ಸೇರಿದ್ದ ಕಾರ್ಯಕರ್ತರತ್ತ ಕೈ ಬೀಸಿದರು –ಪಿಟಿಐ ಚಿತ್ರ   

ಹೈದರಾಬಾದ್‌: ‘ತೆಲಂಗಾಣದ ಜನರು ಆಡಳಿತರೂಢ ಟಿಆರ್‌ಎಸ್‌ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಅವರ ಮೈತ್ರಿಕೂಟದ ವಿರುದ್ಧ ಮುನಿಸಿಕೊಂಡಿದ್ದಾರೆ. ಗ್ರೇಟರ್‌ ಹೈದರಾಬಾದ್‌ ಮಹಾನಗರ ಪಾಲಿಕೆ (ಜಿಎಚ್‌ಎಂಸಿ) ಚುನಾವಣೆಯಲ್ಲಿ ಎಲ್ಲರೂ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದು, ನಮ್ಮ ಪಕ್ಷದವರೇ ಮೇಯರ್‌ ಪಟ್ಟ ಅಲಂಕರಿಸಲಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಜಿಎಚ್‌ಎಂಸಿ ಚುನಾವಣಾ ನಿಮಿತ್ತ ಅವರು ಭಾನುವಾರ ಸಿಕಂದರಾಬಾದ್‌ನಲ್ಲಿ ನಡೆದ ರೋಡ್‌ ಶೋದಲ್ಲಿ ಪಾಲ್ಗೊಂಡಿದ್ದರು.

ಭಾಗ್ಯಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು ‘ಹೈದರಾಬಾದ್‌ನ ಜನ ದಕ್ಷ ಆಡಳಿತವನ್ನು ಬಯಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅಪಾರ ನಂಬಿಕೆ ಇಟ್ಟಿದ್ದಾರೆ. ಎಲ್ಲರೂ ಬಿಜೆಪಿ ಅಭ್ಯರ್ಥಿಗಳ ಪರ ಮತ ಚಲಾಯಿಸಲಿದ್ದಾರೆ’ ಎಂದರು.

ADVERTISEMENT

‘2019ರ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದ ಮತದಾರರು ನರೇಂದ್ರ ಮೋದಿಯವರನ್ನು ಬೆಂಬಲಿಸಿದ್ದರು. ಹೀಗಾಗಿಯೇ ಇಲ್ಲಿ ನಾವು ನಾಲ್ಕು ಸ್ಥಾನಗಳನ್ನು ಗೆದ್ದಿದ್ದೆವು. ಜಿಎಚ್‌ಎಂಸಿ ಚುನಾವಣೆಯಲ್ಲೂ ಮತದಾರರು ನಮ್ಮ ಪಕ್ಷದ ಅಭ್ಯರ್ಥಿಗಳ ಕೈಹಿಡಿಯುವ ವಿಶ್ವಾಸವಿದೆ. ನಾವು ಅಧಿಕಾರಕ್ಕೆ ಬಂದರೆ ಹೈದರಾಬಾದ್‌ ಅನ್ನು ತಂತ್ರಜ್ಞಾನದ ತವರನ್ನಾಗಿ ಮಾರ್ಪಡಿಸುತ್ತೇವೆ’ ಎಂದು ನುಡಿದಿದ್ದಾರೆ.

ಡಿಸೆಂಬರ್‌ 1ರಂದು ಜಿಎಚ್‌ಎಂಸಿ ಚುನಾವಣೆ ನಿಗದಿಯಾಗಿದ್ದು, ನಾಲ್ಕರಂದು ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.