ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿನ ಮಹತ್ವಾಕಾಂಕ್ಷೆಯ ಜಲವಿದ್ಯುತ್ ಯೋಜನೆಗಳ ವಿಸ್ತರಣೆಗೆ ಪ್ರಕೃತಿ ವಿಕೋಪಗಳು ಬೆದರಿಕೆಯಾಗಿ ಪರಿಣಮಿಸಿವೆ. ನೀರ್ಗಲ್ಲು ಸರೋವರಗಳಲ್ಲಿ ಏಕಾಏಕಿ ಪ್ರವಾಹ ಉಂಟಾಗುವ (ಗ್ಲೇಸಿಯರ್ ಲೇಕ್ ಔಟ್‌ಬರ್ಸ್ಟ್ ಫ್ಲಡ್ಸ್–ಜಿಎಲ್‌ಒಎಫ್) ವಿದ್ಯಮಾನಗಳು ಮೂಲಸೌಕರ್ಯ ಮತ್ತು ಸಾವಿರಾರು ಕೋಟಿ ಮೊತ್ತದ ಹೂಡಿಕೆಗಳನ್ನು ಅಪಾಯಕ್ಕೆ ಸಿಲುಕಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರವು ಕಿಶನ್‌ಗಂಗಾ (330 ಮೆಗಾವಾಟ್), ನಿಮೂ ಬಾಜ್ಗೊ (140 ಮೆಗಾವಾಟ್), ಸಲಾಲ್ (690 ಮೆಗಾವಾಟ್) ಮತ್ತು ಉರಿ (1,200 ಮೆಗಾವಾಟ್) ಸೇರಿದಂತೆ ಹಲವಾರು ಪ್ರಮುಖ ಜಲವಿದ್ಯುತ್ ಯೋಜನೆಗಳನ್ನು ಹೊಂದಿದೆ. ಚಿನಾಬ್ ನದಿಯಲ್ಲಿ ಪಾಕಲ್ ದೂಲ್ (1,000 ಮೆಗಾವಾಟ್), ಕಿರೂ (624 ಮೆಗಾವಾಟ್), ಕ್ವಾರ್ (540 ಮೆಗಾವಾಟ್) ಮತ್ತು ರೇಟ್ಲೆ (850 ಮೆಗಾವಾಟ್) ಜಲವಿದ್ಯುತ್ ಯೋಜನೆಗಳು ಅಭಿವೃದ್ಧಿಯ ಹಂತದಲ್ಲಿವೆ.
ಕಿಶ್ತವಾಡಕ್ಕೆ ಸಂಬಂಧಿಸಿದ 2024–25ರ ಸಾಲಿನ ಜಿಎಲ್‌ಒಎಫ್ ನಿರ್ವಹಣೆ ವರದಿಯು ಚಿನಾಬ್ ಕಣಿವೆಯಲ್ಲಿನ ಯೋಜನೆಗಳಿಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ. ಚಿನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಪ್ರೈವೆಟ್ ಲಿಮಿಟೆಡ್‌ನ (ಸಿವಿಪಿಪಿಎಲ್) ನಾಲ್ಕು ಪ್ರಮುಖ ಯೋಜನೆಗಳಾದ ಪಾಕಲ್ ದೂಲ್, ಕಿರೂ, ಕ್ವಾರ್ ಮತ್ತು ಡಾಂಗ್‌ಡುರು– ಅಪಾಯಕ್ಕೆ ಒಳಗಾಗುವ ಹೆಚ್ಚಿನ ಸಾಧ್ಯತೆಯಿದೆ ಎಂದು ಗುರುತಿಸಲಾಗಿದೆ.
‘ನೀರಿನ ಮಟ್ಟ ಏರಿಕೆಯಾದರೆ ಅಥವಾ ಅಣೆಕಟ್ಟೆಯಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಹೆಚ್ಚಾದರೆ ಜಲವಿದ್ಯುತ್ ಯೋಜನೆಯ ಮೂಲಸೌಕರ್ಯಕ್ಕೆ ಅಪಾಯ ಉಂಟಾಗಬಹುದು ಮತ್ತು ಅವುಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗಬಹುದು’ ಎಂದು ವರದಿ ಹೇಳುತ್ತದೆ.
ಪ್ಯಾಡರ್, ಮಚೈಲ್, ದಚ್ಚನ್, ಮರ್ವಾ ಮತ್ತು ವಾರ್ವಾನ್ ಪ್ರದೇಶಗಳು ಹೆಚ್ಚಿನ ಅಪಾಯದಲ್ಲಿವೆ ಎಂದು ವರದಿ ತಿಳಿಸಿದೆ. ಈ ಪ್ರದೇಶಗಳ ಸನಿಹದಲ್ಲಿರುವ ನೀರ್ಗಲ್ಲು ಸರೋವರಗಳು ಜನವಾಸ ಪ್ರದೇಶ ಮತ್ತು ಜಲವಿದ್ಯುತ್ ಯೋಜನೆಗಳು ಇರುವ ತಾಣಗಳಿಗಿಂತ ಎತ್ತರದಲ್ಲಿರುವುದೇ ಇದಕ್ಕೆ ಕಾರಣ.
ಅಧಿಕೃತ ಅಂದಾಜಿನ ಪ್ರಕಾರ ಪಾಕಲ್ ದೂಲ್, ಕಿರೂ, ಕ್ವಾರ್ ಯೋಜನೆಗಳಿಗೆ ಬಿಡುಗಡೆ ಮಾಡಿರುವ ಮೊತ್ತ ಈಗಾಗಲೇ ₹22,535 ಕೋಟಿ ದಾಟಿದೆ. ನೀರ್ಗಲ್ಲು ಸರೋವರ ಒಡೆದು ಉಂಟಾಗುವ ಹಠಾತ್ ಪ್ರವಾಹದಿಂದ ಪ್ರಾಣಹಾನಿಯ ಜತೆಗೆ ಭಾರಿ ಆರ್ಥಿಕ ನಷ್ಟಕ್ಕೂ ಕಾರಣವಾಗಬಹುದು.
ಈಚೆಗಿನ ವರ್ಷಗಳಲ್ಲಿ ಹಿಮಾಲಯವು ‘ಜಿಎಲ್‌ಒಎಫ್’ಗೆ ಸಂಬಂಧಿತ ಹಲವು ವಿಪತ್ತುಗಳಿಗೆ ಸಾಕ್ಷಿಯಾಗಿದೆ. 2021ರ ಫೆಬ್ರುವರಿಯಲ್ಲಿ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮನದಿ ಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಿಂದ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಎರಡು ಜಲವಿದ್ಯುತ್ ಯೋಜನೆಗಳು ನಾಶವಾಗಿದ್ದವು. ಈ ದುರಂತವು ಪರಿಸರ ಸೂಕ್ಷ್ಮ ವಲಯಗಳಲ್ಲಿ ಜಲವಿದ್ಯುತ್ ಯೋಜನೆಗಳನ್ನು ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.