ಶ್ರೀನಗರ:ಜಮ್ಮು ಮತ್ತು ಕಾಶ್ಮೀರದಲ್ಲಿ370ನೇ ವಿಧಿಯನ್ನು ಮರುಸ್ಥಾಪಿಸುವ ಸುಳ್ಳು ಭರವಸೆ ನೀಡಲಾರೆ ಎಂದು ಇತ್ತೀಚೆಗೆ ಕಾಂಗ್ರೆಸ್ ತೊರೆದಿರುವ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಕಾಶ್ಮೀರದ ಬಾರಾಮುಲ್ಲಾ ಪಟ್ಟಣದಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಆಜಾದ್, '370ನೇ ವಿಧಿ ಮರುಸ್ಥಾಪಿಸಲು ಲೋಕಸಭೆಯಲ್ಲಿ 350 ಮತ್ತು ರಾಜ್ಯಸಭೆಯಲ್ಲಿ 175 ಮತಗಳು ಬೇಕು. ಇದು ಯಾವುದೇ ರಾಜಯಕೀಯ ಪಕ್ಷವೂ ಹೊಂದಿರದ ಅಥವಾ ಹೊಂದಲು ಸಾಧ್ಯವಿಲ್ಲದ ಸಂಖ್ಯೆ. ಕಾಂಗ್ರೆಸ್ ಲೋಕಸಭೆಯಲ್ಲಿ 50ಕ್ಕಿಂತಲೂ ಕಡಿಮೆ ಸ್ಥಾನಗಳಿಗೆ ಕುಸಿದಿದೆ. ಒಂದು ವೇಳೆ ಅವರು (ಕಾಂಗ್ರೆಸ್‌ನವರು) 370ನೇ ವಿಧಿ ಮರುಸ್ಥಾಪನೆ ಬಗ್ಗೆಮಾತನಾಡಿದರೆ ಅದು ಸುಳ್ಳು ಆಶ್ವಾಸನೆಯಾಗಲಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
370ನೇ ವಿಧಿ ರದ್ಧತಿ ಪರ ಮತ ಚಲಾಯಿಸಿದ್ದೇನೆ ಎಂದು ಕೆಲವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆದರೆ, ನಾನುವಿಧಿ ರದ್ಧತಿ ವಿರುದ್ಧ ಮತ ಹಾಕಿದ್ದೇನೆ. ನನ್ನ ವಿರುದ್ಧ ಆರೋಪಮಾಡುವವರಿಗೆ ಸಂಸತ್ತಿನ ಕಾರ್ಯಚಟುವಟಿಕೆಯ ಬಗ್ಗೆ ಜ್ಞಾನವೇ ಇಲ್ಲ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿರುವ ಗುಲಾಂ, ಇನ್ನು ಹತ್ತು ದಿನಗಳ ಒಳಗೆ ಹೊಸ ಪಕ್ಷ ಘೋಷಿಸುವುದಾಗಿ ಹೇಳಿದ್ದಾರೆ. ಇದೇ ವೇಳೆ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ, ಸ್ಥಳೀಯರಿಗೆ ಭೂಮಿ ಮತ್ತು ಉದ್ಯೋಗ ಒದಗಿಸುವುದು ತಮ್ಮ ಪಕ್ಷ ಕಾರ್ಯಸೂಚಿಯಾಗಿರಲಿವೆ ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.