ಸೋಮವಾರ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಭಾಗಿಯಾದರು
ಚಿತ್ರ ಕೃಪೆ: VPIndia
ನವದೆಹಲಿ: ‘ಇಂಡೋನೇಷ್ಯಾಕ್ಕೆ ಭಾರತದ ನಾಗರಿಕತೆಯೊಂದಿಗೆ ನಂಟಿದೆ. ಹಲವು ಇಂಡೋನೇಷ್ಯಾದ ಹೆಸರುಗಳು ಸಂಸ್ಕೃತದ ಮೂಲವನ್ನು ಹೊಂದಿವೆ. ನನ್ನಲ್ಲೂ ಭಾರತೀಯ ಡಿಎನ್‌ಎ ಇದೆ’ ಎಂದು ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಹೇಳಿದರು.
ಸೋಮವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಇಂಡೋನೇಷ್ಯಾದ ಭಾಷೆಯ ಬಹುಮುಖ್ಯ ಭಾಗ ಬಂದಿರುವುದು ಸಂಸ್ಕೃತದಿಂದ. ನಮ್ಮ ಹೆಸರು ಸೇರಿದಂತೆ ಹಲವು ಹೆಸರುಗಳ ಸಂಸ್ಕೃತದಲ್ಲಿಯೇ ಇದೆ. ನಮ್ಮ ದಿನನಿತ್ಯದ ದಿನಚರಿಯಲ್ಲಿಯೂ ಪುರಾತನ ಭಾರತದ ನಾಗರಿಕತೆಯ ಪ್ರಭಾವವಿದೆ. ಕೆಲವು ತಿಂಗಳುಗಳ ಹಿಂದೆ ಅನುವಂಶೀಯತೆ ಮತ್ತು ಡಿಎನ್‌ಎ ಪರೀಕ್ಷೆಗೆ ಒಳಗಾಗಿದ್ದೆ, ಆಗ ನನ್ನಲ್ಲಿ ಭಾರತೀಯ ಡಿಎನ್‌ಎ ಇರುವುದು ಗೊತ್ತಾಗಿದೆ’ ಎಂದು ಹೇಳಿದರು.
‘ಭಾರತಕ್ಕೆ ಕೆಲವೇ ದಿನಗಳಿಗಾಗಿ ಬಂದಿರಬಹುದು, ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಯಕತ್ವ, ಬಡತನ ನಿರ್ಮೂಲನೆಗೆ ಅವರು ಕೈಗೊಂಡ ಕ್ರಮಗಳು ಮತ್ತು ಯೋಜನೆಗಳಿಂದ ಹಲವು ವಿಷಯಗಳನ್ನು ಕಲಿತಿದ್ದೇನೆ’ ಎಂದರು.
‘ಬಡತನದ ಅಂಚಿನಲ್ಲಿರುವವರಿಗೆ ಮತ್ತು ಸಮಾಜದಲ್ಲಿ ತಳಮಟ್ಟದಲ್ಲಿರುವವರಿಗೆ ಸಹಾಯ ಮಾಡುವ ಮೋದಿಯವರ ಬದ್ಧತೆ ನಮಗೆ ಸ್ಪೂರ್ತಿಯಾಗಿದೆ. ಉತ್ತಮ ಉದಾಹರಣೆಗಳನ್ನು ಯಾಕೆ ಅನುಸರಿಸಬಾರದು’ ಎಂದರು.
ಸುಬಿಯಾಂತೊ ಅವರು ಭಾನುವಾರ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.