ಮುಂಬೈ: ‘ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ ಸೇರಿದಂತೆ ಹಲವರ ಹೆಸರನ್ನು ಹೇಳುವಂತೆ ತನಿಖಾಧಿಕಾರಿಗಳು ನನಗೆ ಚಿತ್ರಹಿಂಸೆ ನೀಡಿದ್ದರು’ ಎಂದು ಪ್ರಕರಣದಲ್ಲಿ ಖುಲಾಸೆಗೊಂಡಿರುವ ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಬಹಿರಂಗಪಡಿಸಿದ್ದಾರೆ.
ಎನ್‌ಐಎ ನ್ಯಾಯಾಲಯವು ಆದೇಶ ಪ್ರಕಟಿಸಿದ ಮರುದಿನ ಮಾಧ್ಯಮಗಳ ಮುಂದೆ ಈ ಆರೋಪ ಮಾಡಿದ್ದಾರೆ.
‘ತನಿಖೆಯ ವೇಳೆ ನನಗೆ ತೀವ್ರ ಚಿತ್ರಹಿಂಸೆ ನೀಡಲಾಗಿತ್ತು. ನಾನು ಸೂರತ್ (ಗುಜರಾತ್)ನಲ್ಲಿ ಉಳಿದಿದ್ದ ವೇಳೆ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವರ ಹೆಸರು ಹೇಳುವಂತೆ ತನಿಖಾಧಿಕಾರಿಗಳು ಒತ್ತಾಯಿಸಿದ್ದರು. ಆದರೆ, ನಾನು ಯಾರ ಹೆಸರನ್ನೂ ಉಲ್ಲೇಖಿಸಿರಲಿಲ್ಲ. ಯಾವುದೇ ಕಾರಣಕ್ಕೂ ಸುಳ್ಳು ಹೇಳುತ್ತಿಲ್ಲ’ ಎಂದು ತಿಳಿಸಿದ್ದಾರೆ.
‘ನಾನು ಈ ಎಲ್ಲಾ ವಿಚಾರವನ್ನು ಲಿಖಿತವಾಗಿ ದಾಖಲಿಸಿದ್ದೇನೆ. ನನಗೆ ಚಿತ್ರಹಿಂಸೆ ನೀಡುವುದೇ ಅವರ ಮೂಲ ಉದ್ದೇಶವಾಗಿತ್ತು. ನಾನು ಹೆಸರು ಹೇಳದಿದ್ದರೆ, ಚಿತ್ರಹಿಂಸೆ ನೀಡುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಆರ್‌ಎಸ್‌ಎಸ್‌ನ ಸುದರ್ಶನ್, ಇಂದ್ರೇಶ್ ಹಾಗೂ ರಾಮ್ ಮಾಧವ್ ಸೇರಿದಂತೆ ಹೆಸರು ಹೇಳುವಂತೆ ಒತ್ತಾಯಿಸಿದ್ದರು’ ಎಂದು ಠಾಕೂರ್ ನೆನಪಿಸಿದ್ದಾರೆ.
‘ನಾನು ಪ್ರಜ್ಞೆ ತಪ್ಪಿ, ಆಸ್ಪತ್ರೆಗೆ ದಾಖಲಾಗಿದ್ದ ವೇಳೆಯೂ ಅಕ್ರಮವಾಗಿ ನನ್ನನ್ನು ಬಂಧಿಸಿಡಲಾಗಿತ್ತು. ನಾನು ಹೇಳಿದ ಎಲ್ಲಾ ವಿಚಾರವನ್ನು ನಾನು ದಾಖಲಿಸಿದ್ದೇನೆ. ಸತ್ಯವೂ ಹೊರಬಂದಿದೆ. ಇದು ಸನಾತನ ಧರ್ಮಕ್ಕೆ ಸಂದ ಗೆಲುವು, ಹಿಂದುತ್ವಕ್ಕೆ ಸಿಕ್ಕ ಗೆಲುವು, ಸನಾತನಿ ರಾಷ್ಟ್ರಕ್ಕೆ ಸಿಕ್ಕ ಗೆಲುವು’ ಎಂದು ಹೇಳಿದ್ದಾರೆ.
ಪ್ರಜ್ಞಾ ಠಾಕೂರ್ ಮಾಡಿದ ಚಿತ್ರಹಿಂಸೆ, ಚಿಕಿತ್ಸೆಯ ನಿರಾಕರಣೆ ಕುರಿತಾದ ಆರೋಪಗಳನ್ನು ವಿಶೇಷ ನ್ಯಾಯಾಧೀಶ ಎ.ಕೆ.ಲಹೋಟಿ ನೀಡಿದ ಆದೇಶದಲ್ಲಿ ತಿರಸ್ಕರಿಸಿದ್ದಾರೆ.
‘ಈ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ’ ಎಂದು ಆದೇಶದಲ್ಲಿ ವಿವರಿಸಿದ್ದಾರೆ.
ಸಾಕ್ಷಿ ತೆಗೆದುಹಾಕಿದ ನ್ಯಾಯಾಲಯ: ಪ್ರಕರಣದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಹೆಸರು ಉಲ್ಲೇಖಿಸುವಂತೆ ಎಟಿಎಸ್ ಅಧಿಕಾರಿಗಳು ಹಿಂಸೆ ನೀಡಿ, ಒತ್ತಾಯಪಡಿಸಿದ್ದರು ಎಂದು ಸಾಕ್ಷಿದಾರ ಮಿಲಿಂದ್ ಜೋಶಿರಾವ್ ಅವರು ವಿಶೇಷ ನ್ಯಾಯಾಲಯದ ಮುಂದೆ ಸಾಕ್ಷಿ ನುಡಿದಿದ್ದನ್ನು ನ್ಯಾಯಾಲಯವು ತೆಗೆದುಹಾಕಿದೆ.
‘ಎಟಿಎಸ್‌ಗೆ ಅವರು ನೀಡಿದ ಹೇಳಿಕೆಯನ್ನು ಅವಲಂಬಿಸಲು ಸಾಧ್ಯವಾಗಲಿಲ್ಲ. ಸಾಕ್ಷಿಯು ನೀಡಿದ ಹೇಳಿಕೆಯು ಮನಸ್ಸಂಕಲ್ಪವಿಲ್ಲದೇ ನೀಡಿದ್ದರು’ ಎಂದು ಎ.ಕೆ.ಲಹೋಟಿ ಅವರು ತನ್ನ ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.