ADVERTISEMENT

ಕೋವಿಡ್–19 | ಔಷಧ ಕಳುಹಿಸಿದ್ದಕ್ಕೆ ಮೋದಿಗೆ ಧನ್ಯವಾದ ಹೇಳಿದ ಶ್ರೀಲಂಕಾ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 14:01 IST
Last Updated 8 ಏಪ್ರಿಲ್ 2020, 14:01 IST
   

ನವದೆಹಲಿ: ಕೋವಿಡ್‌–19 ಸೋಂಕಿಗೆ ಪರಿಣಾಮಕಾರಿ ಎನ್ನಲಾಗಿರುವ ಔಷಧಿಗಳನ್ನು ಶ್ರೀಲಂಕಾಗೆ ಕಳುಹಿಸಿಕೊಟ್ಟಿರುವುದಕ್ಕೆ ಆ ದೇಶದ ಅಧ್ಯಕ್ಷ ಗೊಟಬಯ ರಾಜಪಕ್ಷೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನತೆಗೆ ಧನ್ಯವಾದ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ರಾಜಪಕ್ಷೆ ಅವರು, ‘ಶ್ರೀಲಂಕಾಗೆ ವಿಶೇಷ ವಿಮಾನದಲ್ಲಿ ಔಷಧಿಯನ್ನು ಕಳುಹಿಸಿಕೊಟ್ಟಿರುವ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಭಾರತದ ಜನರಿಗೆ ಹೃದಯತುಂಬಿ ಮೆಚ್ಚುಗೆ ತಿಳಿಸಲು ಬಯಸುತ್ತೇನೆ. ಅಗತ್ಯ ಸಮಯದಲ್ಲಿ ನೀವು ತೋರಿದ ಉದಾರ ಬೆಂಬಲವು ಪ್ರಶಂಸನೀಯ’ಎಂದು ಟ್ವೀಟ್‌ ಮಾಡಿದ್ದಾರೆ.

ಮಲೇರಿಯಾಗೆ ನೀಡುವ ಹೈಡ್ರಾಕ್ಸಿಕ್ಲೊರೊಕ್ವಿನ್‌ ಮಾತ್ರೆಗಳನ್ನು ಕೊರೊನಾ ಸೋಂಕಿನಿಂದ ಬಳಲುವರೋಗಿಗಳ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ. ಭಾರತಸೇರಿದಂತೆ ಹಲವು ದೇಶಗಳಲ್ಲಿ ಈ ಮಾತ್ರೆಗಳನ್ನು ಬಳಸಲಾಗುತ್ತದೆ.

ADVERTISEMENT

ಈ ಮಾತ್ರೆಗಳ ರಫ್ತು ನಿಷೇಧಿಸಿ ಕೇಂದ್ರ ಸರ್ಕಾರದ ವಿದೇಶಿ ವ್ಯಾಪಾರ ನಿರ್ದೇಶನಾಲಯವು ಇತ್ತೀಚೆಗೆ ಆದೇಶ ಹೊರಡಿಸಿತ್ತು.ಆದರೆ, ಟ್ರಂಪ್ ಅವರು ಮಾತ್ರೆ ಪೂರೈಸುವಂತೆ ಭಾರತಕ್ಕೆ ಒತ್ತಡ ಹೇರಿದ್ದರು. ಅದಾದ ನಂತರ ಸರ್ಕಾರವು ತನ್ನ ನಿರ್ಧಾರ ಬದಲಿಸಿಕೊಂಡಿದ್ದು, ಔಷಧ ರಫ್ತು ಮಾಡಲು ನಿರ್ಧರಿಸಿದೆ.

ಈ ಮಾತ್ರೆಗಳ ಉತ್ಪಾದನೆ ಹಾಗೂ ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿದೆ. ಹೈಡ್ರಾಕ್ಸಿಕ್ಲೊರೊಕ್ವಿನ್‌ ಪೂರೈಕೆ ಮಾಡುವಂತೆ ಅಮೆರಿಕಾ, ಶ್ರೀಲಂಕಾ, ನೇಪಾಳ ಸೇರಿದಂತೆ ಕನಿಷ್ಠ 20 ರಾಷ್ಟ್ರಗಳು ಈಗ ಬೇಡಿಕೆ ಸಲ್ಲಿಸಿವೆ. ನೆರೆಯ ದೇಶಗಳು ಸೇರಿದಂತೆ ಬೇಡಿಕೆ ಸಲ್ಲಿಸಿರುವ ಎಲ್ಲ ದೇಶಗಳಿಗೆ ಮಲೇರಿಯಾ ನಿರೋಧಕ ಮಾತ್ರೆಗಳನ್ನು ಹಂತಹಂತವಾಗಿ ಭಾರತ ಪೂರೈಸಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.