ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ವ್ಯವಸ್ಥೆಯು ಕಡಿಮೆ ಸಾಮರ್ಥ್ಯ ಹೊಂದಿದ್ದರೂ ಭಾರತೀಯ ವಾಯುಪಡೆಯು ಅದಕ್ಕೇ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಏರ್‌ಚೀಫ್ ಮಾರ್ಷಲ್ ಎ.ಪಿ ಸಿಂಗ್ ಶುಕ್ರವಾರ ಹೇಳಿದರು.
ಕಾರ್ಯಕ್ರಮವೊಂದರಲ್ಲಿ ‘ಭಾರತ 2047; ಯುದ್ಧದಲ್ಲಿ ಆತ್ಮನಿರ್ಭರತೆ’ ವಿಷಯದ ಬಗ್ಗೆ ಮಾತನಾಡಿದ ಅವರು, ‘ಪ್ರತಿ ವರ್ಷ ಭಾರತದಲ್ಲಿ ಕನಿಷ್ಠ 35–40 ಯುದ್ಧ ವಿಮಾನಗಳು ತಯಾರಾಗಬೇಕಾದ ಅಗತ್ಯವಿದೆ. ಈ ಗುರಿಯು ಅಸಾಧ್ಯವಾದುದೇನಲ್ಲ’ ಎಂದು ಹೇಳಿದರು.
‘ದೇಶೀಯವಾಗಿ ಅಭಿವೃದ್ಧಿಪಡಿಸಿದ ವ್ಯವಸ್ಥೆಯು ಕಡಿಮೆ ಸಾಮರ್ಥ್ಯ ಹೊಂದಿದ್ದರೂ, ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಧನಗಳಿಗಿಂತ ಶೇ 90ರಷ್ಟು ಅಥವಾ 85ರಷ್ಟು ಸಾಮರ್ಥ್ಯ ಹೊಂದಿದ್ದರೂ ದೇಶೀಯವಾಗಿ ಅಭಿವೃದ್ಧಿಪಡಿಸಿರುವುದಕ್ಕೇ ಆದ್ಯತೆ ನೀಡುತ್ತೇನೆ’ ಎಂದು ತಿಳಿಸಿದರು.
ರಾತ್ರೋ ರಾತ್ರಿ ಸ್ವಾವಲಂಬನೆ ಸಾಧ್ಯವಿಲ್ಲ. ಅದಕ್ಕೆ ಸಮಯ ಮತ್ತು ಬೆಂಬಲ ಬೇಕಾಗುತ್ತದೆ. ಹೀಗಾಗಿ ಯಾವುದೇ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗೆ ಭಾರತೀಯ ವಾಯುಪಡೆಯು ಬದ್ಧವಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.