ಪಿಟಿಐ ಚಿತ್ರ
ನವದೆಹಲಿ: ಪಾಕಿಸ್ತಾನದ ಕಿರಾನಾ ಬೆಟ್ಟದಲ್ಲಿರುವ ಅಣ್ವಸ್ತ್ರ ನೆಲೆ ಮೇಲೆ ಭಾರತ ದಾಳಿ ಮಾಡಿದೆ ಎಂಬ ವದಂತಿಗಳನ್ನು ಭಾರತೀಯ ವಾಯುಪಡೆ (ಐಎಎಫ್) ಸೋಮವಾರ ತಳ್ಳಿಹಾಕಿದೆ.
ಆಪರೇಷನ್ ಸಿಂಧೂರ ಕುರಿತು ಮಾಧ್ಯಮಗೋಷ್ಠಿಯಲ್ಲಿ ಪ್ರತಿನಿಧಿಯೊಬ್ಬರು, ಪಾಕಿಸ್ತಾನದ ಅಣ್ವಸ್ತ್ರ ಸಂಗ್ರಹ ಇರುವ ಕಿರಾನಾ ಬೆಟ್ಟದ ಮೇಲೆ ಭಾರತ ದಾಳಿ ನಡೆಸಿದೆ ಎಂಬ ಚರ್ಚೆ ನಡೆಯುತ್ತಿದೆ. ಆ ಪ್ರದೇಶದಲ್ಲಿ ದಾಳಿ ನಡೆದಿದೆಯೇ? ಎಂದು ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ, ಏರ್ ಮಾರ್ಷಲ್ ಎ.ಕೆ. ಭಾರ್ತಿ ಅವರು, 'ಅಲ್ಲಿ ಏನೇ ಇರಲಿ. ನಾವು ಆ ಬೆಟ್ಟಗಳ ಮೇಲೆ ದಾಳಿ ಮಾಡಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಗೋಧಾದಲ್ಲಿರುವ ವಾಯುನೆಲೆಯ ಮೇಲೆ ಭಾರತ ದಾಳಿ ನಡೆಸಿದೆ. ಈ ವಾಯು ನೆಲೆ ಕಿರಾನಾ ಬೆಟ್ಟಗಳೊಂದಿಗೆ ಸಂಪರ್ಕ ಹೊಂದಿದೆ. ಕಿರಾನಾ ಬೆಟ್ಟದಲ್ಲಿ ಪಾಕ್ ಅಣ್ವಸ್ತ್ರ ನೆಲೆ ಇದೆ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳ ಚರ್ಚೆಯಾಗುತ್ತಿವೆ.
ಸುದ್ದಿಗೋಷ್ಠಿಯಲ್ಲಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಕುರಿತು ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ರಾಜೀವ್ ಘಯಿ, ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕ ವೈಸ್ ಆಡ್ಮಿರಲ್ ಎ.ಎನ್. ಪ್ರಮೋದ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.