ನವದೆಹಲಿ: ತೆರಿಗೆ ಪಾಲು ಹಂಚಿಕೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂಬ ಧ್ವನಿ ಬಲವಾಗುತ್ತಿರುವ ಹೊತ್ತಿನಲ್ಲೇ, ‘ರಾಷ್ಟ್ರೀಯ ಗುರಿಗಳನ್ನು ಸಾಧಿಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯಗಳು ಸಹಕಾರದಿಂದ ಕೆಲಸ ಮಾಡಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಇಲ್ಲಿ ಪ್ರತಿಪಾದಿಸಿದರು.
ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ನಾವು ಅಭಿವೃದ್ಧಿಯ ವೇಗ ಹೆಚ್ಚಿಸಬೇಕು. ಕೇಂದ್ರ ಮತ್ತು ಎಲ್ಲ ರಾಜ್ಯಗಳು ‘ಟೀಮ್ ಇಂಡಿಯಾ’ದಂತೆ ಒಟ್ಟಾಗಿ ಕೆಲಸ ಮಾಡಿದರೆ, ಯಾವುದೇ ಗುರಿ ಅಸಾಧ್ಯವಲ್ಲ’ ಎಂದರು.
‘ನೀತಿಗಳನ್ನು ಜಾರಿಗೆ ತರುವ ಮೂಲಕ ಸಾಮಾನ್ಯ ನಾಗರಿಕರ ಜೀವನದಲ್ಲಿ ಬದಲಾವಣೆ ತರುವ ರೀತಿಯಲ್ಲಿ ನಾವು ಕೆಲಸ ಮಾಡಬೇಕು. 140 ಕೋಟಿ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಒಂದು ತಂಡವಾಗಿ ಕೆಲಸ ಮಾಡಬೇಕಿದೆ’ ಎಂದು ಅವರು ತಿಳಿಸಿದರು.
ಪ್ರತಿಯೊಂದು ರಾಜ್ಯವನ್ನು ವಿಕಸಿತ, ಪ್ರತಿ ನಗರವನ್ನು ವಿಕಸಿತ, ಪ್ರತಿ ನಗರಪಾಲಿಕೆಯನ್ನು ವಿಕಸಿತ ಮತ್ತು ಪ್ರತಿ ಹಳ್ಳಿಯನ್ನು ವಿಕಸಿತ ಮಾಡುವ ಗುರಿಯನ್ನು ನಾವು ಹೊಂದಿರಬೇಕು. ಈ ದಿಕ್ಕಿನಲ್ಲಿ ನಾವು ಕೆಲಸ ಮಾಡಿದರೆ, ಅಭಿವೃದ್ಧಿ ಹೊಂದಿದ ಭಾರತ ಆಗಲು ನಾವು 2047 ರವರೆಗೆ ಕಾಯಬೇಕಾಗಿಲ್ಲ’ ಎಂದು ಮೋದಿ ಹೇಳಿದರು.
‘ಭಾರತವು ವೇಗವಾಗಿ ನಗರೀಕರಣಗೊಳ್ಳುತ್ತಿದೆ’ ಎಂದ ಅವರು, ‘ಭವಿಷ್ಯಕ್ಕೆ ಸಿದ್ಧವಾದ ನಗರಗಳತ್ತ ನಾವು ಕೆಲಸ ಮಾಡಬೇಕು. ಬೆಳವಣಿಗೆ, ಆವಿಷ್ಕಾರ ಮತ್ತು ಸುಸ್ಥಿರತೆಯು ಭಾರತದ ನಗರಗಳ ಅಭಿವೃದ್ಧಿಯ ಎಂಜಿನ್ ಆಗಿರಬೇಕು’ ಎಂದು ಹೇಳಿದರು.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ.ಆರ್.ಸುಬ್ರಹ್ಮಣ್ಯಂ, ‘ಹೂಡಿಕೆದಾರರನ್ನು ಆಕರ್ಷಿಸಲು, ಉತ್ಪಾದನೆ ಉತ್ತೇಜಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಅಡೆತಡೆಗಳನ್ನು ನಿವಾರಿಸುವಂತೆ ಪ್ರಧಾನಿ ಮೋದಿ ಅವರು ರಾಜ್ಯಗಳಿಗೆ ಸಲಹೆ ನೀಡಿದರು. ಕೃಷಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಸೂಚಿಸಿದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.