ADVERTISEMENT

ವರ್ಷಾಂತ್ಯಕ್ಕೆ ಕೋವಿಡ್‌ ಲಸಿಕೆ ಲಭ್ಯ: ಆರೋಗ್ಯ ಸಚಿವ ಡಾ. ಹರ್ಷವರ್ಧನ್ ವಿಶ್ವಾಸ

ಪಿಟಿಐ
Published 23 ಆಗಸ್ಟ್ 2020, 11:50 IST
Last Updated 23 ಆಗಸ್ಟ್ 2020, 11:50 IST
ಡಾ. ಹರ್ಷವರ್ಧನ್
ಡಾ. ಹರ್ಷವರ್ಧನ್   

ನವದೆಹಲಿ: ‘ಎಲ್ಲವೂ ಅಂದುಕೊಂಡಂತೆ ನಡೆದರೆ, ದೇಶದ ಪ್ರಥಮ ಕೋವಿಡ್‌ ಲಸಿಕೆ ವರ್ಷಾಂತ್ಯಕ್ಕೆ ಲಭ್ಯವಾಗಲಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಡಾ. ಹರ್ಷವರ್ಧನ್‌ ಶನಿವಾರ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಪ್ರಸ್ತುತಎರಡು ಸ್ವದೇಶಿ ಸೇರಿದಂತೆ ಮೂರು ಕೋವಿಡ್‌ ಲಸಿಕೆಗಳು ಅಭಿವೃದ್ಧಿಯಾಗುತ್ತಿದ್ದು, ವಿವಿಧ ಹಂತಗಳಲ್ಲಿ ಪ್ರಯೋಗಕ್ಕೆ ಒಳಪಟ್ಟಿವೆ. ಅದರಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಎರಡು ಲಸಿಕೆಗಳು ಮೊದಲ ಹಂತದಲ್ಲಿ ಮಾನವನ ಮೇಲೆ ಪ್ರಯೋಗಕ್ಕೆ ಒಳಪಟ್ಟಿದೆ.

ADVERTISEMENT

ಎರಡು ಸ್ವದೇಶಿ ಲಸಿಕೆಗಳಲ್ಲಿ ಒಂದನ್ನು ಭಾರತ್‌ ಬಯೋಟೆಕ್‌ ಕಂಪನಿಯು ಐಸಿಎಂಆರ್‌ ಸಹಯೋಗದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಇನ್ನೊಂದನ್ನು ಝೈಡಸ್ ಕ್ಯಾಡಿಲ್ಲಾ ಕಂಪನಿಯೊಂದಿಗೆ ತಯಾರಿಸುತ್ತಿದೆ. ಈ ಎರಡೂ ಲಸಿಕೆಗಳು ಎರಡನೇ ಹಂತದ ಪ್ರಯೋಗವನ್ನು ಪೂರ್ಣಗೊಳಿಸಿವೆ ಎಂದು ಇತ್ತೀಚೆಗೆ ಐಸಿಎಂಆರ್ ನಿರ್ದೇಶ ಡಾ. ಬಲರಾಮ್ ಭಾರ್ಗವ್ ಹೇಳಿದ್ದಾರೆ.

ದಿ ಸೆರಮ್ ಸಂಸ್ಥೆ ಹಾಗೂ ಅಸ್ಟ್ರಾ ಝೆನೆಕಾ ಕಂಪನಿಯೊಂದಿಗೆ ಅಭಿವೃದ್ದಿಪಡಿಸುತ್ತಿರುವ ಕೋವಿಡ್‌ ಲಸಿಕೆ ಎರಡನೇ ಹಂತದಲ್ಲಿದೆ. ಈ ಲಸಿಕೆಯನ್ನು ಭಾರತಲ್ಲೇ ಹ್ಯೂಮನ್ ಕ್ಲಿಕಲ್ ಟ್ರಯಲ್‌ಗಳನ್ನು ನಡೆಸಲು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅನುಮತಿ ನೀಡಿದೆ. ಈ ವಾರದಲ್ಲಿ ಆ ಪ್ರಯೋಗಗಳು ಆರಂಭವಾಗುವ ಸಾಧ್ಯತೆ ಇದೆ.

ಈ ನಡುವೆ, ಐಸಿಎಂಆರ್‌ ಸಂಸ್ಥೆ, ಭಾರತ ಮತ್ತು ವಿದೇಶಗಳಲ್ಲಿ ಕೋವಿಡ್‌ ಲಸಿಕೆ ಅಭಿವೃದ್ಧಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವ ಆನ್‌ಲೈನ್ ಲಸಿಕೆ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಅದರಲ್ಲಿ ಇಂಗ್ಲಿಷ್‌ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಮಾಹಿತಿ ಲಭ್ಯವಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.