ADVERTISEMENT

ಯಾವುದೇ ಒಂದು ಶಾಸನಕ್ಕೆ ನ್ಯಾಯಾಲಯ ಅಂಕಿತ ಹಾಕುವಂತಿಲ್ಲ: ಹಿರಿಯ ವಕೀಲ ಸಾಳ್ವೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 16:03 IST
Last Updated 26 ಆಗಸ್ಟ್ 2025, 16:03 IST
   

ನವದೆಹಲಿ: ‘ವಿದಾನಸಭೆಯಲ್ಲಿ ಅಂಗೀಕಾರಗೊಂಡಿರುವ ಯಾವುದೇ ಮಸೂದೆಯನ್ನು ರಾಜ್ಯಪಾಲರು ತಡೆ ಹಿಡಿಯಬಹುದು. ಮಸೂದೆಗಳನ್ನು ತಡೆಹಿಡಿಯುವ ರಾಜ್ಯಪಾಲರಿಗೆ ಇರುವ ಅಧಿಕಾರವನ್ನು ಮರುಪರಿಶೀಲನೆಗೆ ಒಳಪಡಿಸುವುದು ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಹಿರಿಯ ವಕೀಲ ಹರೀಶ್‌ ಸಾಳ್ವೆ ಮಂಗಳವಾರ ಪ್ರತಿಪಾದಿಸಿದರು.

‘ಅಲ್ಲದೇ, ನ್ಯಾಯಾಲಯವು ಯಾವುದೇ ಒಂದು ಶಾಸನಕ್ಕೆ ಅಂಕಿತ ಹಾಕುವಂತಿಲ್ಲ’ ಎಂದೂ ಹೇಳಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಪರ ಹಾಜರಿದ್ದ ಸಾಳ್ವೆ, ರಾಷ್ಟ್ರಪತಿ ಮತ್ತು ರಾಜ್ಯಪಾಲರ ಅಧಿಕಾರಗಳ ಕುರಿತು ದೀರ್ಘ ವಾದ ಮಂಡಿಸಿದರು. ಬಿಜೆಪಿ ಆಡಳಿತವಿರುವ ರಾಜ್ಯಗಳ ಪರ ವಾದ ಮಂಡಿಸಿದ ವಕೀಲರ ಪ್ರತಿಪಾದನೆಯೂ ಇದೇ ಆಗಿತ್ತು.

ADVERTISEMENT

ವಿಧಾನಸಭೆಗಳಲ್ಲಿ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ಸಂಬಂಧಿಸಿ ರಾಜ್ಯಪಾಲರು ಮತ್ತು ರಾಷ್ಟ್ರಪತಿಗೆ ನ್ಯಾಯಾಲಯ ಗಡುವು ನಿಗದಿ ಮಾಡಬಹುದೇ ಎಂಬ ಬಗ್ಗೆ ರಾಷ್ಟ್ರಪತಿ ಸಲಹೆ ಕೇಳಿರುವ ಕುರಿತ ವಿಚಾರಣೆ ವೇಳೆ, ಸಾಳ್ವೆ ಈ ಮಾತು ಹೇಳಿದ್ದಾರೆ.

ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ, ವಿಕ್ರಮನಾಥ್‌, ಪಿ.ಎಸ್‌.ನರಸಿಂಹ ಮತ್ತು ಎ.ಎಸ್‌.ಚಂದೂರ್ಕರ್ ಅವರು ಇದ್ದ ನ್ಯಾಯಪೀಠ ವಿಚಾರಣೆ ನಡೆಸಿತು.

‘ಮಸೂದೆಯೊಂದನ್ನು ತಡೆಹಿಡಿಯಲು ರಾಜ್ಯಪಾಲರಿಗೆ ಅಧಿಕಾರ ಇದೆ ಎಂಬುದನ್ನು ಒಪ್ಪಿಕೊಂಡ ಮೇಲೆ, ಸಾಂವಿಧಾನಿಕ ಹುದ್ದೆಯಲ್ಲಿರುವ ಅವರು ಹಣಕಾಸು ಮಸೂದೆಯನ್ನು ಕೂಡ ತಡೆಹಿಡಿಯಬಹುದಲ್ಲವೇ’ ಎಂಬ ಪ್ರಶ್ನೆ ಮುಂದಿಟ್ಟ ಪೀಠಕ್ಕೆ, ಸಾಳ್ವೆ ಈ ಉತ್ತರ ನೀಡಿದ್ದಾರೆ.

ಉತ್ತರ ಪ್ರದೇಶ ಹಾಗೂ ಒಡಿಶಾ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಕೆ.ಎಂ.ನಟರಾಜ್‌, ಗೋವಾರ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್ ವಿಕ್ರಮಜಿತ್‌ ಬ್ಯಾನರ್ಜಿ, ಛತ್ತೀಸಗಡ ಸರ್ಕಾರ ಪರ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ಮಧ್ಯಪ್ರದೇಶ ಪರ ನೀರಜ್‌ಕಿಶನ್‌ ಕೌಲ್ ಹಾಜರಿದ್ದರು.

ಹರೀಶ್‌ ಸಾಳ್ವೆ ವಾದ

  • ರಾಜ್ಯಪಾಲರು ಮಸೂದೆಯೊಂದನ್ನು ಯಾವಾಗ ತಡೆಹಿಡಿಯಬೇಕು ಯಾವಾಗ ಅಂಕಿತ ಹಾಕಬೇಕು ಅದರ ಬಗ್ಗೆ ರಾಷ್ಟ್ರಪತಿಗಳು ನಿರ್ಧಾರ ಕೈಗೊಳ್ಳುವುದಕ್ಕೆ ಯಾವಾಗ ಕಾಯ್ದಿರಿಸಬೇಕು ಅಥವಾ ಯಾವಾಗ ಅದನ್ನು ರಾಜ್ಯ ಸರ್ಕಾರಕ್ಕೆ ವಾಪಸು ಕಳಿಸಬೇಕು ಎಂಬ ಬಗ್ಗೆ ಸಂವಿಧಾನದ 200ನೇ ವಿಧಿಯು ಹೇಳುವುದಿಲ್ಲ

  • ಮಸೂದೆ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರ ಸಾಂವಿಧಾನಿಕವಾದ ಉನ್ನತ ಹುದ್ದೆಯಲ್ಲಿ ಇರುವವರಿಗೆ ಇದೆ ಎಂಬುದನ್ನು ಒಪ್ಪಿಕೊಂಡ ಮೇಲೆ ಅವರ ಅಧಿಕಾರ ಕುರಿತು ಮರುಪರಿಶೀಲನೆ ನಡೆಸಲು ನ್ಯಾಯಾಂಗ ಅವಕಾಶ ಇರುತ್ತದೆಯೇ?

  • ಮಸೂದೆಯೊಂದಕ್ಕೆ ರಾಷ್ಟ್ರಪತಿ ಇಲ್ಲವೇ ರಾಜ್ಯಪಾಲರು ಅಂಕಿತ ಹಾಕಬೇಕು. ಅವರು ಕೈಗೊಂಡ ನಿರ್ಧಾರ ಪ್ರಸ್ತುತ ಜಾರಿಯಲ್ಲಿರುವ ಕಾನೂನಿಗೆ ಅನುಗುಣವಾಗಿ ಇದೆಯೇ ಎಂಬುದನ್ನು ನಿಷ್ಕರ್ಷೆ ಮಾಡುವ ಅಧಿಕಾರವಷ್ಟೆ ಸಂವಿಧಾನದ 142 ವಿಧಿಯಡಿ ನ್ಯಾಯಾಲಯಕ್ಕೆ ಇದೆ. ಮಸೂದೆಗೆ ಅಂಕಿತ ಹಾಕುವುದಕ್ಕಾಗಿ ನ್ಯಾಯಾಲಯವು ತನ್ನ ಅಧಿಕಾರ ವ್ಯಾಪ್ತಿ ವಿಸ್ತರಿಸುವುದಕ್ಕೆ ಈ ವಿಧಿ ಅವಕಾಶ ನೀಡುವುದಿಲ್ಲ

  • ಮಸೂದೆ ಕುರಿತು ರಾಜ್ಯಪಾಲರು/ರಾಷ್ಟ್ರಪತಿ ಯಾವ ನಿರ್ಧಾರ ಕೈಗೊಂಡಿದ್ದಾರೆ ಎಂದಷ್ಟೆ ನ್ಯಾಯಾಲಯ ಪ್ರಶ್ನಿಸಬಹುದು. ಇಂತಹ ನಿರ್ಧಾರ ಏಕೆ ಕೈಗೊಂಡಿರಿ? ಎಂದು ಕೇಳುವಂತಿಲ್ಲ

  • ತಮಗಿರುವ ಅಧಿಕಾರಗಳನ್ನು ಚಲಾಯಿಸುವ ಮತ್ತು ಕರ್ತವ್ಯಗಳನ್ನು ನಿಭಾಯಿಸುವ ಕುರಿತು ರಾಜ್ಯಪಾಲರು ಹಾಗೂ ರಾಷ್ಟ್ರಪತಿ ಯಾವುದೇ ನ್ಯಾಯಾಲಯಕ್ಕೆ ಉತ್ತರ ನೀಡಬೇಕಿಲ್ಲ. ಇದನ್ನು ಸಂವಿಧಾನದ 361ನೇ ವಿಧಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಕೆ.ಎಂ.ನಟರಾಜ್‌ ವಾದ

  • ರಾಷ್ಟ್ರಪತಿ ಮತ್ತು ರಾಜ್ಯಪಾಲರು ತಮ್ಮ ಕಾರ್ಯನಿರ್ವಹಣೆಗೆ ಸಂಬಂಧಿಸಿ ಸಂಪೂರ್ಣ ಸ್ವಾಯತ್ತತೆ ಹೊಂದಿದ್ದಾರೆ

  • ಯಾವುದೇ ಮಸೂದೆಗೆ ಅಂಕಿತ ಹಾಕುವುದಕ್ಕೆ ಸಂಬಂಧಿಸಿ ಅವರು ತಮ್ಮ ಸಂಫೂರ್ಣ ವಿವೇಚನಾ ಅಧಿಕಾರ ಚಲಾಯಿಸುವ ಅಧಿಕಾರ ಹೊಂದಿದ್ದಾರೆ

  • ವಿದಾನಸಭೆಗಳಲ್ಲಿ ಅಂಗೀಕಾರಗೊಂಡ ಮಸೂದೆಗಳಿಗೆ ಅಂಕಿತ ಹಾಕುವುದಕ್ಕಾಗಿ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗೆ ನ್ಯಾಯಾಲಯಗಳು ಕಾಲಮಿತಿ ವಿಧಿಸುವಂತಿಲ್ಲ ವಿಕ್ರಮಜಿತ್‌ ಬ್ಯಾನರ್ಜಿ ವಾದ

  • ಶಾಸನ ರಚನೆಗೆ ಸಂಬಂಧಿಸಿದ ಸಾಂವಿಧಾನಿಕ ಪ್ರಕ್ರಿಯೆಯಂತೆ ಮಸೂದೆಗೆ ರಾಜ್ಯಪಾಲರ ಅಂಕಿತ ಅಗತ್ಯ. ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕಿದ್ದಾರೆ ಎಂಬುದಾಗಿ ಪರಿಭಾವಿಸುವುದಕ್ಕೆ ಅವಕಾಶ ಇಲ್ಲ

  • ‘ಪರಿಭಾವಿತ ಅಂಕಿತ’ ಎಂಬ ಪರಿಕಲ್ಪನೆ ಸಂವಿಧಾನದಲ್ಲಿ ಇಲ್ಲ. ಹಾಗಾಗಿ ವಿಧಾನಸಭೆಗಳಲ್ಲಿ ಅಂಗೀಕಾರಗೊಂಡಿರುವ ಮಸೂದೆಗಳಿಗೆ ‘ಪರಿಭಾವಿತ ಅಂಕಿತ’ ನೀಡುವ ಅಧಿಕಾರ ನ್ಯಾಯಾಲಯಗಳಿಗೆ ಇಲ್ಲ ಮಹೇಶ್ ಜೇಠ್ಮಲಾನಿ ವಾದ

  • ಈ ವಿಚಾರ ಕುರಿತು ಏಪ್ರಿಲ್‌ 8ರಂದು ಸುಪ್ರೀಂ ಕೋರ್ಟ್‌ ನೀಡಿದ ಆದೇಶದಲ್ಲಿ ಸಂವಿಧಾನದ 200ನೇ ವಿಧಿಯಲ್ಲಿ ಉಲ್ಲೇಖವಿರದ ಅಂಶವನ್ನು ಸೇರಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.