ADVERTISEMENT

ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ಅದು ಮಥುರಾದಿಂದಲೇ : ಹೇಮಾ ಮಾಲಿನಿ

ಪಿಟಿಐ
Published 6 ಜೂನ್ 2023, 6:14 IST
Last Updated 6 ಜೂನ್ 2023, 6:14 IST
ಹೇಮಾ ಮಾಲಿನಿ
ಹೇಮಾ ಮಾಲಿನಿ   

ಮಥುರಾ: ಲೋಕಸಭಾ ಚುನಾವಣೆ ಇನ್ನೇನು ಸಮೀಪಿಸುತ್ತಿದ್ದು, ಚುನಾವಣೆಗೆ ಸ್ಪರ್ಧಿಸುವುದಾದರೆ ಅದು ಮಥುರಾದಿಂದಲೇ ಎಂದು ಮಥುರಾದ ಹಾಲಿ ಬಿಜೆಪಿ ಸಂಸದೆ ಹೇಮಮಾಲಿನಿ ಪಣತೊಟ್ಟಿದ್ದಾರೆ.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 9 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಸದೆ ಹೇಮಮಾಲಿನಿ, ಮಾಧ್ಯಮದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ‘ಮುಂದಿನ ಚುನಾವಣೆಯನ್ನು ನಾನು ಮಥುರಾದಿಂದಲೇ ಸ್ಪರ್ಧಿಸಲಿದ್ದೇನೆ. ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಪ್ರಸ್ತಾಪ ಮಾಡಿದರೂ ಅದಕ್ಕೆ ಸುತಾರಾಂ ಒಪ್ಪುವುದಿಲ್ಲ‘ ಎಂದು ಹೇಳಿದರು.

ಮಥುರಾದಲ್ಲೇ ಸ್ಪರ್ಧಿಸುವ ತಮ್ಮ ಇಂಗಿತದ ಹಿಂದಿನ ಕಾರಣ ತಿಳಿಸಿದ ಸಂಸದೆ, ‘ಭಗವಾನ್‌ ಶ್ರೀಕೃಷ್ಣ ಮತ್ತು ಆತನ ಭಕ್ತರ ಮೇಲೆ ನನಗೆ ಅಪಾರ ಪ್ರೀತಿಯಿದೆ. ಕೃಷ್ಣನ ಭಕ್ತರ ಸೇವೆ ಮಾಡಲು ನಾನು ಬಯಸುತ್ತೇನೆ‘ ಎಂದರು.

ADVERTISEMENT

ಮತ್ತೆ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘9 ವರ್ಷಗಳ ಸಾಧನೆ ಮೇಲೆಯೇ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ‘ ಎಂದು ಭರವಸೆ ವ್ಯಕ್ತಪಡಿಸಿದರು.

2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಮಥುರಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹೇಮಾ ಮಾಲಿನಿ, ಎರಡು ಬಾರಿಯೂ ಗೆಲುವಿನ ನಗೆ ಬೀರಿದ್ದರು. ಇದಕ್ಕೂ ಮೊದಲು ಇವರು ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.