ADVERTISEMENT

ಬೆಂಗಳೂರಲ್ಲಿ ಶಾಲೆಕಲಿತ ಐಐಟಿ ಹೈದರಾಬಾದ್‌ ವಿದ್ಯಾರ್ಥಿಗೆ ₹2.5 ಕೋಟಿ ಸಂಬಳದ ಕೆಲಸ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜನವರಿ 2026, 10:06 IST
Last Updated 2 ಜನವರಿ 2026, 10:06 IST
Venugopala K.
   Venugopala K.

ನವದೆಹಲಿ: ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ(ಐಐಟಿಎಚ್) ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಓದುತ್ತಿರುವ 21 ವರ್ಷದ ವಿದ್ಯಾರ್ಥಿ ಎಡ್ವರ್ಡ್ ನಾಥನ್ ವರ್ಗೀಸ್ ವಾರ್ಷಿಕ ₹2.5 ಕೋಟಿ ಪ್ಯಾಕೇಜ್ ಸಂಬಳದ ಉದ್ಯೋಗ ಗಿಟ್ಟಿಸುವ ಮೂಲಕ ದಾಖಲೆ ಬರೆದಿದ್ಧಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

2008ರಲ್ಲಿ ಐಐಟಿ ಹೈದರಾಬಾದ್ ಸ್ಥಾಪನೆಯಾದಾಗಿನಿಂದ ಸಂಸ್ಥೆಯ ವಿದ್ಯಾರ್ಥಿಯೊಬ್ಬ ಪಡೆದ ಅತ್ಯಧಿಕ ಪ್ಯಾಕೇಜ್ ಇದಾಗಿದೆ. ನೆದರ್‌ಲ್ಯಾಂಡ್ಸ್‌ನ ಜಾಗತಿಕ ವ್ಯಾಪಾರ ಸಂಸ್ಥೆಯಾದ ‘ಆಪ್ಟಿವರ್‘ ಈ ಆಫರ್ ಕೊಟ್ಟಿದೆ.

ಎಡ್ವರ್ಡ್ ಈ ವರ್ಷದ ಜುಲೈನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಸಂಸ್ಥೆಯನ್ನು ಸೇರಲಿದ್ದಾರೆ. ಅವರ ಎರಡು ತಿಂಗಳ ಇಂಟರ್ನ್‌ಶಿಪ್ ಅನ್ನು ಪ್ರೀ ಪ್ಲೇಸ್‌ಮೆಂಟ್ ಆಫರ್ ಆಗಿ ಸಂಸ್ಥೆ ಪರಿವರ್ತಿಸಿದೆ.

ADVERTISEMENT

21 ವರ್ಷದ ವಿದ್ಯಾರ್ಥಿ ತನ್ನ ಯಶಸ್ಸಿಗೆ ಐಐಟಿ ಟ್ಯಾಗ್, ಫ್ಲೆಕ್ಸಿಬಲ್ ಕರಿಕ್ಯುಲಮ್ ಮತ್ತು ಎಂಜಿನಿಯರಿಂಗ್‌ನ ಮೊದಲ ವರ್ಷದಿಂದ ಕೋಡಿಂಗ್ ಮತ್ತು ಸ್ಪರ್ಧಾತ್ಮಕ ಪ್ರೋಗ್ರಾಮಿಂಗ್‌ನ ಮೇಲೆ ಬಲವಾದ ಗಮನ ಕಾರಣ ಎಂದು ಹೇಳುತ್ತಾನೆ.

ಮಾಧ್ಯಮ ವರದಿಗಳ ಪ್ರಕಾರ, ಉದ್ಯೋಗ ಪ್ರಕ್ರಿಯೆಯ ಸಮಯದಲ್ಲಿ ಅವರು ಸಂದರ್ಶನ ಎದುರಿಸಿದ ಮೊದಲ ಮತ್ತು ಏಕೈಕ ಕಂಪನಿ ಇದಾಗಿದೆ ಎಂದು ಎಡ್ವರ್ಡ್ ಹೇಳಿದ್ದಾನೆ.

ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ಎಡ್ವರ್ಡ್, ಬೆಂಗಳೂರಿನಲ್ಲಿ 7–12ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದರು.

ಜೆಇಇ ಮುಖ್ಯ ಪರೀಕ್ಷೆಯಲ್ಲಿ 1100ನೇ ರ್‍ಯಾಂಕ್, 2022ರ ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆಯಲ್ಲಿ 558ನೇ ರ್‍ಯಾಂಕ್ ಗಳಿಸಿದ್ದರು. CATನಲ್ಲಿ 99.96 ಪರ್ಸಂಟೇಜ್‌ನೊಂದಿಗೆ 120ನೇ ರ್‍ಯಾಂಕ್ ಪಡೆದಿದ್ದ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.