ADVERTISEMENT

ಕೃಷ್ಣ ಜನ್ಮಭೂಮಿ ಬಳಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್‌ ತಡೆ

ಪಿಟಿಐ
Published 16 ಆಗಸ್ಟ್ 2023, 10:33 IST
Last Updated 16 ಆಗಸ್ಟ್ 2023, 10:33 IST
ಉತ್ತರ ಪ್ರದೇಶದ ಮಥುರಾದಲ್ಲಿರುವ ಕೃಷ್ಣ ಜನ್ಮಭೂಮಿ ಬಳಿ ನಡೆಸಲಾದ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಯ ನಂತರ ಜನರು ಪ್ರದೇಶವನ್ನು ತೊರೆದು ಸಾಗಿದರು
ಉತ್ತರ ಪ್ರದೇಶದ ಮಥುರಾದಲ್ಲಿರುವ ಕೃಷ್ಣ ಜನ್ಮಭೂಮಿ ಬಳಿ ನಡೆಸಲಾದ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಯ ನಂತರ ಜನರು ಪ್ರದೇಶವನ್ನು ತೊರೆದು ಸಾಗಿದರು   ಪಿಟಿಐ ಚಿತ್ರ

ನವದೆಹಲಿ: ಉತ್ತರ ಪ್ರದೇಶದ ಮಥುರಾದಲ್ಲಿನ ಕೃಷ್ಣ ಜನ್ಮಭೂಮಿ ಬಳಿಯ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗೆ ತಡೆ ನೀಡಿರುವ ಸುಪ್ರೀಂ ಕೋರ್ಟ್‌, ಹತ್ತು ದಿನಗಳ ಕಾಲ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್, ಸಂಜಯ್ ಕುಮಾರ್ ಹಾಗೂ ಎಸ್‌ವಿಎನ್‌ ಭಟ್ಟಿ ಅವರಿದ್ದ ಪೀಠವು, ಈ ಸೂಚನೆ ನೀಡಿ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ.

ಅರ್ಜಿದಾರ ಯಾಕೂಬ್ ಶಹಾ ಪರವಾಗಿ ವಾದ ಮಂಡಿಸಿದ ವಕೀಲರು, ‘ನೂರಕ್ಕೂ ಹೆಚ್ಚು ಮನೆಗಳನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. 70ರಿಂದ 80 ಮನೆಗಳು ಬಾಕಿ ಉಳಿದಿವೆ. ಉತ್ತರ ಪ್ರದೇಶದ ನ್ಯಾಯಾಲಯಗಳು ರಜೆ ಇದ್ದ ದಿನವೇ ಈ ಕಾರ್ಯಾಚರಣೆ ನಡೆಸಿರುವುದು ದುರುದ್ದೇಶದಿಂದ ಕೂಡಿದ್ದಾಗಿದೆ’ ಎಂದು ಪೀಠದ ಗಮನಕ್ಕೆ ತಂದರು.

ADVERTISEMENT

‘1800ರಿಂದಲೂ ಇಲ್ಲಿ ಈ ಮನೆಗಳು ಇವೆ. ಕಟ್ಟಡ ತರವಿಗೂ ಪೂರ್ವದಲ್ಲಿ ನೀಡಲಾಗಿದ್ದ ನೋಟಿಸ್‌ಗೆ ತಡೆಯಾಜ್ಞೆ ಇದೆ. ಆದರೆ ಹೈಕೋರ್ಟ್‌ ರಜೆ ಇದೆ’ ಎಂದು ವಕೀಲರು ಹೇಳಿದರು.

ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸುತ್ತಿರುವ ರೈಲ್ವೆ ಇಲಾಖೆಯ ಕ್ರಮದಿಂದ ನೊಂದವರು ಅಲಹಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಹೇಳಿತು.

‘ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರ ಮುಂದೆ ಪ್ರಕರಣವನ್ನು ತರಲು ನಿಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಅಲ್ಲಿಯೇ ಇದನ್ನು ಪ್ರಶ್ನಿಸಿ’ ಎಂದು ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.